ದಕ್ಷಿಣ ಭಾರತದ ಏಕೈಕ ಕೋಟಿಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಕೋಲಾರ: ಇಂದು ಮಹಾಶಿವರಾತ್ರಿ ಅಂಗವಾಗಿ ಮುಂಜಾನೆಯಿಂದಲೇ ಕೋಲಾರ ಜಿಲ್ಲೆಯಲ್ಲಿ ವಿವಿಧ ಶಿವನ ದೇವಾಲಯಗಳಿಗೆ ಭಕ್ತರು ಬೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಕೋಲಾರದ ಅಂತರಗಂಗೆಯಲ್ಲಿರುವ ಕಾಶಿ ವಿಶ್ವನಾಥ ಹಾಗೂ ಸೋಮೇಶ್ವರ ದೇವಾಲಯ ಸೇರಿದಂತೆ ಏಕ ಕಾಲದಲ್ಲಿ ಕೋಟಿ ಶಿವಲಿಂಗಗಳ ದರ್ಶನ ನೀಡುವ ಕೋಟಿಲಿಂಗ ಕ್ಷೇತ್ರದಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿದೆ. ಇನ್ನು ಶಿವನ ದರ್ಶನ ಪಡೆಯಲು ತಮಿಳುನಾಡು, ಆಂಧ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಜನಸ್ತೋಮವೆ ಹರಿದು ಬರುತ್ತಿದೆ. ವಿಶ್ವದ ಏಕೈಕ ಸ್ಥಳ ಕೋಟಿ ಶಿವಲಿಂಗಗಳನ್ನು ಏಕ ಕಾಲದಲ್ಲಿ ತಮ್ಮ ಕಣ್ತುಂಬಿಕೊಳ್ಳುವ ಅಪೂರ್ವ ಕೋಟಿಲಿಂಗ ಕ್ಷೇತ್ರ.
ಹೌದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದ ಬಳಿ ಇರುವ ಕೋಟಿಲಿಂಗೇಶ್ವರ ಕ್ಷೇತ್ರ. ಇಂದು ಮಹಾಶಿವರಾತ್ರಿ ಅಂಗವಾಗಿ ಕೋಟಿಲಿಂಗೇಶ್ವರದಲ್ಲಿ ವಿಶೇಷ ಪೂಜೆ ಹಾಗೂ ಮುಂಜಾನೆಯಿಂದಲೇ ಅಲ್ಲಿನ 108 ಅಡಿಯ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿದೆ.
ಜೊತೆಗೆ ಇಲ್ಲಿನ ಕೋಟಿ ಶಿವಲಿಂಗಗಳಿಗೂ ಅದ್ದೂರಿ ಅಲಂಕಾರ ಮಾಡಲಾಗಿದೆ. ಇಂದು ಮಹಾಶಿವರಾತ್ರಿಯ ಅಂಗವಾಗಿ ದಿನವಿಡೀ ಪೂಜಾ ಕೈಂಕರ್ಯಗಳು ನಡೆಯುತ್ತವೆ, ರಾತ್ರಿಗೆ ಜಾಗರಣೆಯ ಅಂಗವಾಗಿ ಹರಿಕಥೆ ಹಾಗೂ ಭಜನೆ ಏರ್ಪಡಿಸಲಾಗಿದೆ. ಜೊತೆಗೆ ಈ ವಿಶೇಷ ದಿನಂದದು ಲಕ್ಷಾಂತರ ಜನರು ಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.