ಕರಡಿ‌ ಬೋನ್ ನಿಂದ ತಪ್ಪಿಸಿಕೊಂಡು ಚಾಲಕನ ಮೇಲೆ ದಾಳಿ ಮಾಡಿ ಪರಾರಿ

 
ಕರಡಿ‌ ಬೋನ್ ನಿಂದ ತಪ್ಪಿಸಿಕೊಂಡು ಚಾಲಕನ ಮೇಲೆ ದಾಳಿ ಮಾಡಿ ಪರಾರಿ

ಆನೇಕಲ್: ರೆಸ್ಕ್ಯೂ ಮಾಡಿ ತರಲಾಗಿದ್ದ ಕರಡಿ‌ ಬೋನ್ ನಿಂದ ತಪ್ಪಿಸಿಕೊಂಡು ಚಾಲಕನ ಮೇಲೆ ದಾಳಿ ಮಾಡಿ ಪರಾರಿಯಾಗಿರುವಂತಹ‌ ಘಟನೆ ನಡೆದಿದೆ.

ತುಮಕೂರಿನ ಸಿದ್ದಗಂಗಾ ಮಠದ ಸುತ್ತಮುತ್ತಲಿನ ಕಡೆಯಲ್ಲಿ ನಿರಂತರವಾಗಿ ಕರಡಿ ಕಾಣಿಸಿಕೊಳ್ಳುತ್ತಿದ್ದು ಕರಡಿಯನ್ನು ಹಿಡಿದು ರಕ್ಷಣೆ ಮಾಡಿ ಅದನ್ನು ಬನ್ನೇರುಘಟ್ಟಕ್ಕೆ ಇಂದು ಕಳುಹಿಸುವ ವ್ಯವಸ್ಥೆಯನ್ನ ಮಾಡಲಾಗಿತ್ತು. ಅದರಂತೆಯೇ  ವಾಹನದಲ್ಲಿ ಕೇಜ್ ನ ಮೂಲಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರದ ಬಳಿ ತರಲಾಗಿತ್ತು, ಕರಡಿ ಇದ್ದ ಕೇಜ್ ನನ್ನು ವಾಹನದಿಂದ ಹೊರ ತೆಗೆಯುತ್ತಿದ್ದಂತೆ ಕೆಳಬದಿಯ ಕಬ್ಬಿಣದ ಶೀಟನ್ನು ಕಿತ್ತು ಎಸ್ಕೇಪ್ ಆಗಲು ಮುಂದಾಗಿದೆ. ಈ ಸಂದರ್ಭದಲ್ಲಿ ಎದುರಿಗೆ ಇದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರ ವಾಹನದ ಚಾಲಕ ಜಯಶಂಕರ್ ಎಂಬುವವರ ಮೇಲೆ ದಾಳಿ ನಡೆಸಿದ ಕರಡಿ ತಲೆಗೆ ತೀವ್ರವಾಗಿ ಗಾಯ ಮಾಡಿದೆ. ಕೂಡಲೇ ಎಚ್ಚೆತ್ತುಕೊಂಡ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಚಾಲಕನನ್ನು ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನೂ ಕರಡಿ ಉದ್ಯಾನವನ ಸಮೀಪದ ಹುಚ್ಚನಕುಂಟೆ ಕೆರೆ ಸಮೀಪದಲ್ಲಿ ಅಡಗಿರುವ ಸಾಧ್ಯತೆಗಳು ಹೆಚ್ಚಿದ್ದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಡಿಯನ್ನು ಹುಡುಕುವ ಕಾರ್ಯಾಚರಣೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ಹಾಗೂ ರಾಷ್ಟ್ರೀಯ ಉದ್ಯಾನವನದ ಎರಡು ತಂಡಗಳನ್ನು ನೇಮಕ ಮಾಡಿ ಕೂಂಬಿಂಗ್ ಮಾಡಲಾಗುತ್ತಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಜನ ಓಡಾಡುವ ಜಾಗದಲ್ಲಿ ಕರಡಿ ಏನಾದರೂ ಬರಬಹುದು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಭದ್ರತೆಯ ಸಲುವಾಗಿ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿ ಕಾರ್ಯಾಚರಣೆ ಮಾಡುತ್ತಿರುವ ತಂಡದವರಿಗೆ ಅರವಳಿಕೆ ಚುಚ್ಚುಮದ್ದನ್ನು ನೀಡಿ ಕರಡಿಯನ್ನು ಸೆರೆಹಿಡಿಯಲು ಒಂದಾಗಿದ್ದೇವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

From Around the web