ಚಾಮರಾಜನಗರದಲ್ಲಿ ಸದ್ಯದಲ್ಲಿಯೇ ಆರಂಭವಾಗಲಿದೆ ಸಿಎಫ್ ಟಿಆರ್ಐ ಮಾದರಿಯಲ್ಲಿ ಅರಿಶಿಣ ಪರೀಕ್ಷಾ ಪ್ರಯೋಗಾಲಯ..

 
ಚಾಮರಾಜನಗರದಲ್ಲಿ ಸದ್ಯದಲ್ಲಿಯೇ ಆರಂಭವಾಗಲಿದೆ ಸಿಎಫ್ ಟಿಆರ್ಐ ಮಾದರಿಯಲ್ಲಿ ಅರಿಶಿಣ ಪರೀಕ್ಷಾ ಪ್ರಯೋಗಾಲಯ..

ಚಾಮರಾಜನಗರ : ರಾಜ್ಯದ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲೀಗ ರೈತರು ಬೆಳೆದ ಅರಿಶಿಣ ಕರ್ಕ್ಯೂಮಿನ್ ಪರೀಕ್ಷೆಗಾಗಿ ಮೈಸೂರಿನ ಸಿಎಫ್ ಟಿಆರ್ ಐ ಮಾದರಿಯಲ್ಲಿ ಸುಮಾರು ಮುಕ್ಕಾಲು ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಆರಂಭವಾಗುತ್ತಿದೆ. 

ಹೌದು. ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಿರುವ ಚಾಮರಾಜನಗರದ ಅರಿಶಿಣ ಮಾರುಕಟ್ಟೆಯಲ್ಲಿ 2017-18 ರಿಂದ ಅರಿಶಿಣ ಕರ್ಕ್ಯೂಮಿನ್ ಪರೀಕ್ಷೆ ನಡೆಸಲಾಗುತ್ತಿತ್ತು. 2020ರಲ್ಲಿ ಕೊರೊನದಿಂದ ಲಾಕ್ಡೌನ್ ಆದ ಪರಿಣಾಮ ಪರೀಕ್ಷೆಗಳು ಸ್ಥಗಿತಗೊಂಡು, ಪ್ರಯೋಗಾಲಯ ನಿಷ್ಕ್ರಿಯಗೊಂಡಿದೆ. ಇದರಿಂದ ಸಂಕಷ್ಟಕ್ಕೀಡಾದ ರೈತರ ನೆರವಿಗಾಗಿ ಎಪಿಎಂಸಿ ಆಡಳಿತ ಮಂಡಳಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ ಕಟ್ಟಡದಲ್ಲಿ ಮೈಸೂರಿನ ಸಿಎಫ್ ಟಿಆರ್ ಐ ಮಾದರಿಯಂತೆ ಸುಮಾರು 50ಲಕ್ಷ ರೂ.ವೆಚ್ಚದ ಅತ್ಯಾಧುನಿಕ ಯಂತ್ರೋಪಕರಣಗಳನ್ನೊಳಗೊಂಡ ಪ್ರಯೋಗಾಲಯದ ಆರಂಭಕ್ಕೆ ಸಜ್ಜಾಗಿದೆ.

ಪ್ರಸ್ತುತ ಅರಿಶಿಣದ ಮಾರುಕಟ್ಟೆಯಲ್ಲಿ ಆರಂಭಿಸಲಾಗುತ್ತಿರುವ ಪ್ರಯೋಗಾಲಯ ಕೇವಲ ಅರಿಶಿಣ ಪರೀಕ್ಷೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಾಗಿ ರೈತರು ಬೆಳೆದ ಎಲ್ಲ ಬಗೆಯ ತರಕಾರಿ ಹಾಗೂ ಎಣ್ಣೆ ಕಾಳುಗಳನ್ನು ಪರೀಕ್ಷೆ ಮಾಡುವ ಪ್ರಯೋಗಾಲಯ ಇದಾಗಲಿದೆ. 

ಈಗ ಅರಿಶಿನ ಮಾರಾಟ ಆರಂಭವಾಗಿದೆ. ರೈತರು ತಮ್ಮ ಅರಿಶಿನ ಕರ್ಕ್ಯೂಮಿನ್ ಪರೀಕ್ಷೆ ಗಾಗಿ ಎಪಿಎಂಸಿಗೆ ತರಲಾಗುತ್ತಿರುವ ಅರಿಶಿಣದ ಸ್ಯಾಂಪಲ್ ಗಳನ್ನು ಎಪಿಎಂಸಿ ಆಡಳಿತ ಮಂಡಳಿ ತಾತ್ಕಾಲಿಕವಾಗಿ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡುತ್ತಿದೆ.

ಅತ್ಯಾಧುನಿಕ ಪ್ರಯೋಗಾಲಯ ಆರಂಭಕ್ಕೆ ಲ್ಯಾಬ್ ಟೆಕ್ನಿಷಿಯನ್ ಅವಶ್ಯಕತೆ ಪೂರೈಕೆಯಾದ ಬಳಿಕ ರೈತರು ತರುವಂತಹ ಅರಿಶಿಣದ ಸ್ಯಾಂಪಲ್ ಗಳನ್ನು ಇಲ್ಲಿಯೇ ಪರೀಕ್ಷೆ ಮಾಡಲಾಗುವುದು. ಇದಕ್ಕಾಗಿ ನಾವು ನಮ್ಮ ಮುಖ್ಯ ಕಚೇರಿಗೆ ಪತ್ರ ಬರೆದಿದ್ದೇವೆ. ರಾಜ್ಯದ 18 ಕಡೆ ಲ್ಯಾಬ್ ಟೆಕ್ನಿಶಿಯನ್ಗಳ ಕೊರತೆ ಇದೆ. ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದ್ದು, ಸಂದರ್ಶನ ಪ್ರಕ್ರಿಯೆ ನಡೆಸುತ್ತಿದ್ದೇವೆ. ಕೂಡಲೇ ಅರಿಶಿಣ ಕರ್ಕ್ಯೂಮಿನ್ ಪರೀಕ್ಷೆ ಆರಂಭವಾಗಲಿದೆ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ನಾಗೇಂದ್ರ.

ಒಟ್ಟಾರೆ ಕಲವೇ ದಿನಗಳಲ್ಲಿ ಚಾಮರಾಜನಗರದಲ್ಲಿ ಮೈಸೂರಿನ ಸಿಎಫ್ ಟಿಆರ್ ಐ ಮಾದರಿಯಂತೆ ಆರಂಭವಾಗಲಿರುವ ಅರಿಶಿಣ ಪರೀಕ್ಷೆ ಪ್ರಯೋಗಾಲಯ ರೈತರ ಪಾಲಿಗೆ ವರವಾಗುವ ಜೊತೆಗೆ ರಾಜ್ಯದಲ್ಲಿಯೇ ಏಕೈಕ ಅರಿಶಿಣ ಮಾರುಕಟ್ಟೆ ಎನ್ನುವ ಕೀರ್ತಿಗೆ ಪಾತ್ರವಾಗಿ ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಗೆ ಸೆಡ್ಡುಹೊಡೆಯಲಿದೆ.

- ಸುಂದರ್, ಡೆಮಾಕ್ರಟಿಕ್ ಟಿವಿ, ಚಾಮರಾಜನಗರ

From Around the web