ಕೊಳ್ಳೇಗಾಲದಲ್ಲಿ ಸರಣಿಗಳ್ಳತನ : ಒಂದೇ ದಿನ ಮೂರು ಮನೆಗೆ ಕನ್ನಹಾಕಿದ ಖದೀಮರು

 
ಕೊಳ್ಳೇಗಾಲದಲ್ಲಿ ಸರಣಿಗಳ್ಳತನ : ಒಂದೇ ದಿನ ಮೂರು ಮನೆಗೆ ಕನ್ನಹಾಕಿದ ಖದೀಮರು

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ವ್ಯಾಪ್ತಿಯ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂ.ಹಣವನ್ನು ಕಳ್ಳರೂ ಕದೊಯ್ದಿದ್ದಾರೆ.

ಮಂಗಳವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯ‌ ನೋಡಿ ಕನ್ನ ಹಾಕಿರುವ ಖದೀಮರು, ಮನೆ ಬಾಗಿಲು ಮುರಿದು ಕಳ್ಳತನ ವ್ಯಸಗಿರುವ ಘಟನೆ ನಡೆದಿದೆ.

ಕೊಳ್ಳೇಗಾಲ ಪಟ್ಟಣದ ಆದರ್ಶ ಬಡಾವಣೆಯ ನಿವಾಸಿ ನಿವೃತ್ತ ಎಎಸ್ಐ ಶಂಕರಮೂರ್ತಿ ಎಂಬುವರ ಮನೆಯಲ್ಲಿದ್ದ 60 ಸಾವಿರ ರೂ. ನಗದು, ಸುಮಾರು 1.70 ಲಕ್ಷ ರೂ.ಬೆಲೆಬಾಳುವ 30 ಗ್ರಾಂ. ಚಿನ್ನ ಕಳ್ಳತನವಾಗಿದೆ. ಶಂಕರಮೂರ್ತಿ ಕುಟುಂಬ ಚೈನೈಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಬಸವೇಶ್ವರ ನಗರದ ವೀರಣ್ಣೇಗೌಡ ಎಂಬುವರ ಮನೆಯಲ್ಲಿ 40 ಸಾವಿರ ಹಣ ಕಳ್ಳವಾಗಿದೆ. ತಾಯಿಯು ಅನಾರೋಗ್ಯ ಬಳಲುತ್ತಿದ್ದರಿಂದ ಹುಟ್ಟೂರಾದ ಗಂಗವಾಡಿಗೆ ವೀರಣ್ಣೇಗೌಡ ಕುಟುಂಬದವರು ತೆರಳಿದ್ದ ವೇಳೆ ಚಾಲಕಿ ಖದೀಮರು ಕೈಚಳಕ ತೋರಿಸಿದ್ದಾರೆ.

ಇನ್ನೂ ರಾಜೀವ್ ನಗರದ ಕೃಷ್ಣಕುಮಾರ್ ಎಂಬುವರ ಮನೆಯೊಂದರಲ್ಲಿ ಸುಮಾರು 30 ಸಾವಿರ ರೂ.ನಗದು ಕಳ್ಳತನವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ಯಾವುದೇ ದೂರು ಬಂದಿಲ್ಲ.

ಸದ್ಯ ಸಿಪಿಐ ಶ್ರೀಕಾಂತ್, ಅಪರಾಧ ವಿಭಾಗದ ಪಿಎಸ್ಐ ಮಾದೇಗೌಡ ಕಳ್ಳತನವಾದ ಮನೆಗಳಿಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೆ ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯಲ್ಲಿ ಸರಣಿಗಳ್ಳತನವಾಗಿ ಪಟ್ಟಣದ ಜನತೆಯಲ್ಲಿ ಆತಂಕ ಮನೆಮಾಡಿತ್ತು. ಆದರೆ ಪೊಲೀಸರು ತಮ್ಮ ಮಿಂಚಿನ‌ ಕಾರ್ಯಚರಣೆಯಿಂದ ಕಳ್ಳರನ್ನು ಸೆರೆಹಿಡಿದು ಸೈ ಎನಿಸಿಕೊಂಡಿದ್ದರು.

From Around the web