ಬಿಸಿಲಿನ ಬೇಗೆಗೆ ಚಾಮರಾಜನಗರ ಜನ ಕಂಗಾಲು‌ : ಸಾರ್ವಜನಿಕ ಸ್ಥಳಗಳಲ್ಲಿ ಸಿಗ್ತಿಲ್ಲ ಕುಡಿವ ನೀರು..!

 
ಬಿಸಿಲಿನ ಬೇಗೆಗೆ ಚಾಮರಾಜನಗರ ಜನ ಕಂಗಾಲು‌ : ಸಾರ್ವಜನಿಕ ಸ್ಥಳಗಳಲ್ಲಿ ಸಿಗ್ತಿಲ್ಲ ಕುಡಿವ ನೀರು..!

ಚಾಮರಾಜನಗರ: ಕಳೆದ ಒಂದು ವಾರದಿಂದ ಚಾಮರಾಜನಗರ ಜಿಲ್ಲಾದ್ಯಂತ ಏರಿಕೆ ಕಂಡಿರುವ ತಾಪಮಾನದಿಂದ ಬಿಸಿಲ ಬೇಗೆಗೆ ಜನರು ಕಂಗಾಲಾಗಿದ್ದಾರೆ.

ಬೇಸಿಗೆ ಆರಂಭ ಕಾಲದಲ್ಲೇ ಸೂರ್ಯ ನೆತ್ತಿ ಸುಡುತ್ತಿದ್ದು, ಸುಡು ಬಿಸಿಲಿಗೆ ಜನರು ತತ್ತರಿಸಿದ್ದಾರೆ‌. ಗ್ರಾಮೀಣ ಭಾಗಗಳಿಂದ ಜಿಲ್ಲಾಕೇಂದ್ರಕ್ಕೆ ಬರುವವರಂತೂ ಧಗೆಗೆ ಹೈರಾಣಾಗಿದ್ದಾರೆ. ಫೆಬ್ರವರಿವರಿಯಲ್ಲಿ ಸರಾಸರಿ 28-32 ಇದ್ದ ತಾಪಮಾನ ಕಳೆದ ಒಂದು ವಾರದಿಂದ ಸರಾಸರಿ 35-36 ಆಗಿದೆ.

ಐಸ್ ಕ್ರೀಮ್, ಮಜ್ಜಿಗೆ , ತಂಪು ಪಾನೀಯಗಳು, ಎಳನೀರಿಗೆ ಸಾಲುಗಟ್ಟಿ ಜನರು ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. 25 ರೂ. ಇದ್ದ ಎಳನೀರು 30 ರೂ‌. ಆಗಿದ್ದು ದರ ಏರಿಕೆಯಿಂದಲೂ ಜನರಿಗೆ ಕೈ ಸುಡುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗ್ತಿಲ್ಲ ನೀರು :  ಜೇಬಲ್ಲಿ ಹಣ ಇಟ್ಟುಕೊಂಡು ಬಂದವರು, ಅಧಿಕಾರಿಗಳು, ಹಣವಿರುವ ಕೆಲವರು ತಂಪು ಪಾನೀಯಗಳು ಅಥವಾ ಎಳನೀರನ್ನು ಖರೀದಿಸಿ ಕುಡಿಯುತ್ತಾರೆ. ಆದರೆ ಜನ ಸಾಮಾನ್ಯರು, ಬಡವರು , ಹಾಗೂ ಗ್ರಾಮೀಣ ಪ್ರದೇಶದಿಂದ ನಗರ, ಪಟ್ಟಣ ಪ್ರದೇಶಕ್ಕೆ ಬಂದವರಿಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ನಗರಸಭೆ ಮಾಡಿಲ್ಲ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ.

ಚಾಮರಾಜನಗರದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು ಇದರಿಂದ ನಗರ ಸಭೆ  ಹಾಗೂ ಸಂಬಂಧಪಟ್ಟ ಅಧಿಕಾರಿಗಳು  ಸಾರ್ವಜನಿಕ ಸ್ಥಳಗಳು, ಪಾರ್ಕ್ ಗಳು, ಸರ್ಕಾರಿ ಕಚೇರಿಗಳ ಮುಂಭಾಗ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಜಿಲ್ಲಾಡಳಿತ ಭವನದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಕೆಲಸಕ್ಕಾಗಿ ಬರುವ ಜನರು ನೀರು ಕುಡಿಯಬೇಕೆಂದರೆ ಹಣತೆತ್ತು ತಂಪು ಪಾನೀಯ ಕೊಡಬೇಕು ಇಲ್ಲವೇ ಹೋಟೆಲ್ ಗಳನ್ನು ಎಡತಾಕುವ ಪರಿಸ್ಥಿತಿ ಇದ್ದು ಅಧಿಕಾರಿ ವರ್ಗ ಸೂಕ್ಷಗ್ರಾಹಿಗಳಾಗಿ ಸಮಸ್ಯೆ ಪರಿಹರಿಸಬೇಕಿದೆ.

From Around the web