ಸಿಎಂ ಯಡಿಯೂರಪ್ಪ ಅವರ ಸಿಡಿ ಬಿಡುಗಡೆ ಯಾಗುಬೇಕು : ವಾಟಾಳ್ ನಾಗರಾಜ್ ಆಗ್ರಹ

 
ಸಿಎಂ ಯಡಿಯೂರಪ್ಪ ಅವರ ಸಿಡಿ ಬಿಡುಗಡೆ ಯಾಗುಬೇಕು : ವಾಟಾಳ್ ನಾಗರಾಜ್ ಆಗ್ರಹ

ಚಾಮರಾಜನಗರ: ಸಿಎಂ ಯಡಿಯೂರಪ್ಪ ಅವರದ್ದು ಒಂದು ಸಿಡಿ ಇದೆ ಎಂದು ಅವರ ಮಂತ್ರಿಗಳೇ ಹೇಳ್ತಿದ್ದಾರೆ, ಮೊದಲು ಆ ಸಿಡಿಯನ್ನು ಬಹಿರಂಗಪಡಿಸಲಿ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿ,ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಒಬ್ಬರ ಸಿಡಿ ಮಾತ್ರವಲ್ಲ, ಸಿಎಂ ಯಡಿಯೂರಪ್ಪ ಅವರ ಸಿಡಿಯೂ ಬಿಡುಗಡೆಯಾಗಬೇಕು. ಆ ಸಿಡಿಯಲ್ಲಿ ಏನಿದೆ ಎಂದು ಜನರಿಗೆ ಗೊತ್ತಾಗಬೇಕು. ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಶಾಸನಸಭೆಯಲ್ಲಿ ಚರ್ಚೆಯಾಗಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.

ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ  ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಿದ್ದಾರೆ. ಸಿಡಿ ವಿಚಾರವನ್ನು ಶಾಸನ ಸಭೆಯಲ್ಲಿ ಚರ್ಚೆಗೆ ತರುವಲ್ಲಿ ವಿರೋಧಪಕ್ಷ ಸಂಪೂರ್ಣ ವಿಫಲವಾಗಿದೆ. ಕಾಗೇರಿ ಅವರಿಗೆ ಆ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯತೆ ಇಲ್ಲಾ ಎಂದು ಅವರು ಕಿಡಿಕಾರಿದರು.

ಸಿಡಿಯಲ್ಲಿ ಜಾರಕಿಹೊಳಿ ಮರಾಠಿ ಏಜೆಂಟ್ ನಂತೆ ಮಾತನಾಡಿದ್ದಾರೆ. ಆದ್ದರಿಂದ, ಎಸ್ಐಟಿ ತನಿಖೆ ಅಲ್ಲ ಸಿಬಿಐ ಮೂಲಕ ಸಿಡಿ ವಿಚಾರ ತನಿಖೆ ನಡೆಸಬೇಕು. ಆ ಸಿಡಿಯಲ್ಲಿ ಯಡಿಯೂರಪ್ಪ ಸರಿಯಿಲ್ಲ ಎಂಬ ಒಂದೇ ಒಂದು ಸತ್ಯವನ್ನು ಜಾರಕಿಹೊಳಿ ಹೇಳಿದ್ದಾರೆ ಎಂದು ಅವರು ವ್ಯಂಗ್ಯ ಮಾಡಿದರು.

ಆಯವ್ಯಯ ಯಡಿಯೂರಪ್ಪನ ಆಸ್ತಿಯಲ್ಲ : ಆಯವ್ಯಯ ಎಂದರೆ ಯಡಿಯೂರಪ್ಪ ಅವರಪ್ಪನ ಆಸ್ತಿಯಲ್ಲ. 6 ಕೋಟಿ ಜನರಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕಿತ್ತು. ಚಾಮರಾಜನಗರಕ್ಕೆ ಯಡಿಯೂರಪ್ಪ ಬರ್ತಾನೂ ಇಲ್ಲಾ- ಅನುದಾನವನ್ನೂ ಕೊಡ್ತಿಲ್ಲ. ಸಿಕ್ಕ ಸಿಕ್ಕ ಜಾತಿಗೆಲ್ಲಾ ಪ್ರಾಧಿಕಾರ ರಚಿಸಿ ಹಣ ಕೊಡುತ್ತಾ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದು ಬಜೆಟ್ ಬಗ್ಗೆ ಅಸಮಾಧಾನ ಹೊರಹಾಕಿದರು.

ಯಡಿಯೂರಪ್ಪ ಒಬ್ಬ ಸರ್ವಾಧಿಕಾರಿ ಆಗಿದ್ದಾರೆ. ಅಧಿಕಾರ ಹಿಡಿದು ದೌಲತ್ತು ಪ್ರದರ್ಶನ ಮಾಡುತ್ತಿದ್ದಾರೆ, ಮಂತ್ರಿಗಳು ಗುಲಾಮರಂತೆ ವರ್ತಿಸುತ್ತಿದ್ದಾರೆ. ಅವರು ಚಾಮರಾಜನಗರಕ್ಕೆ ಯಾವ ಕಾರಣಕ್ಕೆ ಬರದೇ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಲಿಂಬೆಹುಳಿ ಆದ ಲಿಂಬಾವಳಿ: ಕೊಡಗಿನ ನರಹಂತಕ ಹುಲಿ ಸೆರೆ ಕುರಿತು ಮಾತನಾಡುವಾಗ, ಅದು ಯಾರದು ಲಿಂಬೆಹುಳಿ, ಅವರು ಕಾಡಲ್ಲಿರಬೇಕಾದವರು ಬೆಂಗಳೂರಿನಲ್ಲಿದ್ದಾರೆ,  ಮಾನವ- ವನ್ಯಜೀವಿ ಸಂಘರ್ಷ ಎಷ್ಟರ ಮಟ್ಟಿಗೆ ಆಗಿದೆಯೆಂದರೆ ಮುಂದಿನ ದಿನಗಳಲ್ಲಿ ಇಡೀ ವನ್ಯಜೀವಿ ಸಮೂಹವೇ ನಾಡಿಗೆ ನುಗ್ಗುವ ಭಯ ಕಾಡುತ್ತಿದೆ, ಕೊಡಗಿನಲ್ಲಿ ಹುಲಿಯನ್ನು ಸೆರೆ ಹಿಡಿಯಬೇಕು, 15 ರಂದು ಅರಣ್ಯ ಇಲಾಖೆ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತೇನೆ ಎಂದರು‌.‌

From Around the web