ಕೊರೊನಾ ಎರಡನೇ ಅಲೆ : ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ -  ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ..!!

 
ಕೊರೊನಾ ಎರಡನೇ ಅಲೆ : ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ - ಜಿಲ್ಲಾಡಳಿತಕ್ಕೂ ಇಲ್ಲವೆ ಚಿಂತೆ..!!

ಚಾಮರಾಜನಗರ: ಕೊರೊನಾ ಎರಡನೇ ಅಲೆಯಿಂದ ತಮಿಳುನಾಡು, ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್ ಗಳ ಮಧ್ಯೆಯೂ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೇ ಸಂಚರಿಸುತ್ತಿದ್ದು, ಆರೋಗ್ಯ ಇಲಾಖೆಯಾಗಲಿ, ನಗರಸಭೆಯಾಗಲಿ ತಲೆಕೆಡಿಸಿಕೊಂಡಿಲ್ಲದ ವಾತಾವರಣ ಕಂಡು ಬರುತ್ತಿದೆ.

ಕೋವಿಡ್ ತಡೆಗೆ ಸರ್ಕಾರ ಬಿಗಿ ನಿಯಮಗಳನ್ನು ಜಾರಿ ಮಾಡಿದ್ದರೂ ಜನರು ಯಾವುದೇ ಭೀತಿ ಇಲ್ಲದೆ ಗುಂಪು ಗುಂಪಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಹಾಗೂ ಓಡಾಟದಲ್ಲಿ ತೊಡಗಿಕೊಂಡಿದ್ದು ಕನಿಷ್ಠ ಮಾಸ್ಕ್ ಧರಿಸುವುದನ್ನು ಕೂಡ ಮರೆತಂತಿದ್ದು ಅರಿವು ಮೂಡಿಸಬೇಕಾದ ಅಧಿಕಾರಿಗಳು ಸುಮ್ಮನಿದ್ದಾರೆ.

ಪ್ರಾರಂಭದಲ್ಲಿದ್ದ ಆತಂಕ ಇದೀಗ ಕಡಿಮೆ ಯಾಗಿದ್ದು ಡೋಂಟ್ ಕೇರ್ ಮನೋಭಾವ ಪ್ರದರ್ಶನವಾಗುತ್ತಿದ್ದು, ನಗರಸಭೆ ಅಧಿಕಾರಿಗಳು ಮಾಸ್ಕ್ ಧಾರಣೆಯ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿಲ್ಲ. ಬುಧವಾರವಷ್ಟೇ ಜಿಲ್ಲಾಧಿಕಾರಿ ಸಭೆ, ಸಮಾರಂಭಗಳಿಗೆ ಸೀಮಿತ ಸಂಖ್ಯೆಯ ವ್ಯಕ್ತಿಗಳನ್ನು ಸೇರಿಸಬೇಕೆಂದು, ಅನುಮತಿ ಪಡೆಯಬೇಕೆಂದು ಸೂಚಿಸಿದ್ದಾರೆ.

ಕೋವಿಡ್ ಆರಂಭದ ಹೊಸ್ತಿಲಿನಲ್ಲಿ ಬಿಗಿ ನಿಯಮ, ತೀವ್ರ ಕಟ್ಟೆಚ್ಚರದ ಪರಿಣಾಮ ಕೊರೊನಾ ಸೋಂಕು ಪತ್ತೆಯಾಗದ ಕರ್ನಾಟಕದ ಏಕೈಕ ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲಿ ಈಗ ವಾತಾವರಣವೇ ಬೇರೆಯಾಗಿದ್ದು ಪ್ರವಾಸಿ ತಾಣಗಳು, ಜಿಲ್ಲಾಕೇಂದ್ರದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವವರೇ ಇಲ್ಲದಿರುವುದನ್ನು ಕಂಡಾಗ ಸೋಂಕು ಹೆಚ್ಚುವ ಕಳವಳ ಪ್ರಜ್ಞಾವಂತರಲ್ಲಿ ಮನೆ ಮಾಡಿದೆ.

ಇನ್ನಾದರೂ ಜಿಲ್ಲಾಡಳಿತ ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಪಾಠ ಮಾಡಬೇಕಿದ್ದು, ಕೊರೊನಾ ಸೋಂಕು ಮುಕ್ತ ಚಾಮರಾಜನಗರ ಎಂಬ ಹೆಮ್ಮೆಗೆ ಜಿಲ್ಲೆ ಮತ್ತೇ ಪಾತ್ರವಾಗಲು ಶ್ರಮಿಸಬೇಕಿದೆ.

From Around the web