ಲಸಿಕೆ ಪಡೆಯುವಲ್ಲಿ ನಿರ್ಲಕ್ಷ್ಯ ಬೇಡ : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

 
ಲಸಿಕೆ ಪಡೆಯುವಲ್ಲಿ ನಿರ್ಲಕ್ಷ್ಯ ಬೇಡ : ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ಚಾಮರಾಜನಗರ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಜಿಲ್ಲೆಯಲ್ಲಿ ಇಲ್ಲಿಯ ವರೆಗೂ ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು 794 ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 1 ಲಕ್ಷದಷ್ಟು ಇದ್ದಾರೆ. 45 ರಿಂದ 59 ವರ್ಷದೊಳಗಿನ ದೀರ್ಘಕಾಲಿನ ಅನಾರೋಗ್ಯ ಪೀಡಿತರು ಉದಾಸೀನ ಮಾಡದೆ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಯಾವುದಾದರೊಂದು ಗುರುತಿನ ಚೀಟಿ ತೋರಿಸುವ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆಯಬಹುದು ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದ 4 ದಿನಗಳು ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರಗಳಂದು ಬೆಳಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ಲಸಿಕೆ ಪಡೆದುಕೊಳ್ಳಬಹುದು. ಉಳಿದಂತೆ ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಹಾಗೂ ಇತರೆ ರಜಾ ದಿನಗಳನ್ನು ಹೊರತುಪಡಿಸಿ ವಾರದ 6 ದಿನವೂ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.31ರವರೆಗೂ ರಾಜ್ಯದಲ್ಲಿ ತಾತ್ಕಾಲಿಕ ನಿರ್ಬಂಧವಿಧಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಯುಗಾದಿ ಹಬ್ಬದ ವರೆಗೂ ಜನರು ಸಂಯಮದಿಂದ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಹಬ್ಬ, ಜಾತ್ರೆ ಹೆಚ್ಚಾಗಿ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳೊಂದಿಗೆ ಅನುಮತಿ ಕೊಡಲಾಗುತ್ತಿದೆ. ಕೊರೋನಾ ನಿಯಮ ಉಲ್ಲಂಘನೆಯಾದರೆ ಸಂಘಟಿತರ ಮೇಲೆ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದರು.

ಹೋಟೆಲ್, ರೆಸಾರ್ಟ್, ಕಲ್ಯಾಣಮಂಟಪ, ಗಾರ್ಮೆಂಟ್ಸ್‍ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 15 ದಿನಕ್ಕೊಮ್ಮೆ ಆರ್‍ಟಿಪಿಸಿಆರ್ ಮಾಡಿಸುವ ನಿಟ್ಟಿನಲ್ಲಿ ಅಲ್ಲಿನ ಮಾಲೀಕರು ಕ್ರಮವಹಿಸಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು. ಅಲ್ಲದೇ ಲಾರಿ ಹಾಗೂ ಟ್ರಕ್ ಮಾಲೀಕರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೋಗಿ ಬರುವ ತಮ್ಮ ಚಾಲಕರಿಗೆ ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.

From Around the web