ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಭೇಟಿ : ಆರೋಗ್ಯ ಕೇಂದ್ರ ಪರಿಶೀಲನೆ

 
ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಭೇಟಿ : ಆರೋಗ್ಯ ಕೇಂದ್ರ ಪರಿಶೀಲನೆ

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರು ಗುಂಡ್ಲುಪೇಟೆ ತಾಲೂಕಿನ ವಿವಿಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಸೌಲಭ್ಯಗಳು ಹಾಗೂ ಕೋವಿಡ್ ಲಸಿಕೆ ಅಭಿಯಾನ ಕಾರ್ಯವನ್ನು ವೀಕ್ಷಿಸಿದರು.

ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಆರೋಗ್ಯ ಪೂರಕ ಸೇವಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಷ್ಟು ಜನರಿಗೆ ಪ್ರಯೋಜನವಾಗುತ್ತಿದೆ. ಯಾವ ಬಗೆಯ ಆರೋಗ್ಯ ತಪಾಸಣೆ ಪರೀಕ್ಷೆಗಳು ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದರು.

ಕೋವಿಡ್ ಲಸಿಕೆ ನೀಡುವ ಕಾರ್ಯ ನಿರ್ವಹಣೆಯನ್ನು ಪರಿಶಿಲಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಕೋವಿಡ್ ಲಸಿಕೆ ಪಡೆಯಲು ಆಗಮಿಸಿದ್ದ ಹಿರಿಯ ನಾಗರಿಕರೊಂದಿಗೆ ಸಮಾಲೋಚಿಸಿದರು. ಲಸಿಕೆ ಪಡೆಯಲು ಯಾವುದೇ ಭಯ ಪಡಬೇಡಿ ರೋಗ ತಡೆಗೆ ಲಸಿಕೆ ಪಡೆಯುವುದರಿಂದ ಅನುಕೂಲವಾಗಲಿದೆ. ಈ ಬಗ್ಗೆ ಇತರರಿಗು ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಆರೋಗ್ಯ ಕೇಂದ್ರ ಮುಂಭಾಗದಲ್ಲಿರುವ ಕೆರೆ ಕಲುಷಿತ ವಾಗಿರುವುದನ್ನು ಗಮನಿಸಿದ ಅವರು ಅಲ್ಲಿನ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನಯ ಕರೆಯಿಸಿ ಕೆರೆ ಶುಚಿಗೊಳಿಸುವ ಕಾರ್ಯವನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಬೇಕು. ಕೆರೆ ಅಭಿವೃದ್ದಿ ಕೆಲಸವನ್ನು ಕೈಗೊಂಡ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ಮಾಡಬೇಕು ಎಂದು ಸೂಚಿಸಿದರು.

ಬೇಗೂರಿನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಟಾಟಾ ಟೆಕ್ನಾಲಜಿ ರವರ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಉನ್ನತೀಕರಣ ಕಾಮಗಾರಿಯನ್ನು ಪರಿಶೀಲಿಸಿದರು. ಕಾಲಮಿತಿಯೊಳಗೆ ಗುಣಮಟ್ಟದ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದರು.

From Around the web