ಬೇಸಿಗೆ ಅವಧಿಯಲ್ಲಿಯೂ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲು ದುಡಿಯೋಣ ಬಾ ಅಭಿಯಾನ

 
ಬೇಸಿಗೆ ಅವಧಿಯಲ್ಲಿಯೂ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲು ದುಡಿಯೋಣ ಬಾ ಅಭಿಯಾನ

ಚಾಮರಾಜನಗರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಬೇಸಿಗೆ ಅವಧಿಯಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ನಿರಂತರವಾಗಿ ಉದ್ಯೋಗ ಒದಗಿಸುವ ಉದ್ದೇಶದಿಂದ ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿದುಡಿಯೋಣ ಬಾಅಭಿಯಾನ ಆರಂಭವಾಗಿದೆ.

ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ವಲಸೆ ಪ್ರವೃತ್ತಿಯನ್ನು ಅವಲಂಭಿಸಿವೆ. ಪ್ರವೃತ್ತಿಯನ್ನು ತಡೆಯಲು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿಯೂ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆ ಬಾರದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಅವಕಾಶ ಒದಗಿಸುವ ಸಲುವಾಗಿ ವಿಶೇಷವಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿದುಡಿಯೋಣ ಬಾಅಭಿಯಾನ  ನಡೆಯಲಿದೆ.

ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಕೆಲಸ ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಅಭಿಯಾನದ ಉದ್ದೇಶವಾಗಿದೆ.

ಮಾರ್ಚ್ 15 ರಿಂದ 22ರವರೆಗೆ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಅಭಿಯಾನ ಕುರಿತು ಜನ ಜಾಗೃತಿ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಉದ್ಯೋಗ ಚೀಟಿ ಹೊಂದಿಲ್ಲದೆ ಇರುವ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆಯಬೇಕು. ಜನ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಂದ ಒಂದೇ ಬಾರಿಗೆ ಮೂರು ತಿಂಗಳ ಕೆಲಸದ ಬೇಡಿಕೆ ಪಡೆಯಬೇಕು ಎಂದು ಸೂಚಿಸಲಾಗಿದೆ.

ಮಾರ್ಚ್ 23 ರಿಂದ 31ರವರೆಗೆ ಉದ್ಯೋಗ ಚೀಟಿಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಬೇಕು. ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತ ಮಂಜೂರಾತಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಕೆ, ಜಿಯೋ ಟ್ಯಾಗ್ ಇತ್ಯಾದಿ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು, ವ್ಯವಸ್ಥಿತವಾಗಿ ಕೂಲಿಕಾರರ ಗುಂಪುಗಳನ್ನು ರಚಿಸಿ ಮೇಟ್ ಗಳನ್ನು ಗುರುತಿಸಿ ತರಬೇತಿ ನೀಡಬೇಕು.

ಏಪ್ರಿಲ್ 1 ರಿಂದ ಜೂನ್ 15ರವರೆಗೆ ಪ್ರತೀ ಸೋಮವಾರ ಕೆಲಸದ ಬೇಡಿಕೆ ಸಲ್ಲಿಸಿದ ವಿವರಗಳನ್ನು ದಾಖಲಿಸಿ ಎರಡು ದಿನಗಳೊಳಗೆ ಕೆಲಸ ಒದಗಿಸಬೇಕು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶು ಪಾಲನೆಯಂತಹ ಸೌಲಭ್ಯಗಳನ್ನು ಕಲ್ಪಸಿಬೇಕು, ಕೂಲಿಕಾರರಿಗೆ ನಿರಂತರವಾಗಿ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಗಿದೆ.

ಅಭಿಯಾನದ ಸುಗಮ ನಿರ್ವಹಣೆ ಹಾಗೂ ಪ್ರಗತಿಗಾಗಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿ ಸಮಿತಿ ರಚಿಸಿ ಸೂಕ್ತ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ.

ಅಭಿಯಾನ ಅವಧಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ, ಸೋಕ್ ಪಿಟ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಕೆರೆ ಅಭಿವೃದ್ದಿ ಕಾರ್ಯಕ್ರಮದಡಿ ಕಾಲುವೆಗಳ ಪುನಶ್ಚೇತನ, ಕೆರೆಗಳ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ಥಿ, ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಲಾಗಿದೆ. ರಸ್ತೆಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ತೋಟಗಾರಿಕೆ ಬೆಳೆ ಬೆಳೆಯಲು ಗುಂಡಿ ತೆಗೆಯುವುದು, ಬೋರ್ವೆಲ್ ರೀಚಾರ್ಜ್ ಕಾಮಗಾರಿ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ನಿರ್ವಹಿಸಿದಲ್ಲಿ 16,500/- ರೂ ಗಳನ್ನು ಪಡೆಯಬಹುದಾಗಿದೆ. ದುಡಿಯೋಣ ಅಭಿಯಾನದ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಧೀರ್ಘಕಾಲ ಮೇಟ್ ಆಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಹಾಗೂ ನಾಯಕತ್ವ ಗುಣಗಳನ್ನು ಹೊಂದಿರುವ ಒಬ್ಬರನ್ನು ಅಭಿಯಾನದ ಅವಧಿಗೆ ರಾಯಭಾರಿಯಾಗಿ ನೇಮಿಸಿಕೊಳ್ಳಲು ಸಹ ತಿಳಿಸಲಾಗಿದೆ. ಒಟ್ಟಾರೆ ದುಡಿಯೋಣ ಬಾ ಅಭಿಯಾನ ಯಶಸ್ವಿಯಾಗಿಸಲು ಎಲ್ಲಾ ಸಿದ್ದತೆ ನಡೆದಿದೆ.

From Around the web