ಮನವಿ ಮಾಡಿದ ಮೂರೇ ದಿನಗಳಲ್ಲಿ ಕಲಾವಿದನಿಗೆ ಹಾರ್ಮೋನಿಯಂ: ಸಂತಸಗೊಂಡ ಅಂಧ ಕಲಾವಿದ

 
ಮನವಿ ಮಾಡಿದ ಮೂರೇ ದಿನಗಳಲ್ಲಿ ಕಲಾವಿದನಿಗೆ ಹಾರ್ಮೋನಿಯಂ: ಸಂತಸಗೊಂಡ ಅಂಧ ಕಲಾವಿದ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆಯಲ್ಲಿ ಕಳೆದ 20ರ ಶನಿವಾರ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ವೇಳೆ ಅಂಧ ಕಲಾವಿದ ಓರ್ವರು ಹಾರ್ಮೋನಿಯಂ ನೀಡುವಂತೆ ಮಾಡಿದ ಮನವಿಗೆ ಮೂರೇ ದಿನಗಳಲ್ಲಿ ಸ್ಪಂದನೆ ಸಿಕ್ಕಿದ್ದು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರೇ ಕಲಾವಿದರಿಗೆ ಹಾರ್ಮೋನಿಯಂ ವಿತರಿಸಿದ್ದಾರೆ.

ಕೊಡಸೋಗೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ನಡೆದ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಬೊಮ್ಮಲಾಪುರದ ಬೆಟ್ಟನಾಯಕ ಎಂಬ ಅಂಧ ಕಲಾವಿದರು ತಾವು ಭಜನೆ, ಸಂಗೀತ, ಗೀತ ಗಾಯನದಂತಹ ಕಾರ್ಯಕ್ರಮಗಳಲ್ಲಿ ನನ್ನ ಸಂಗಡಿಗರೊಂದಿಗೆ ಪಾಲ್ಗೊಳ್ಳುತ್ತಿದ್ದೇನೆ. ನನಗೆ ಹಾರ್ಮೋನಿಯಂ ನೀಡಿದ್ದಲ್ಲಿ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಯವರ ಬಳಿ ಅಹವಾಲು ಸಲ್ಲಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಗೀತ ಪರಿಕರಗಳ ವಿತರಣೆ ಯೋಜನೆಯಡಿ ಕೂಡಲೇ  ಹಾರ್ಮೋನಿಯಂ ನೀಡುವಂತೆ ಸೂಚನೆ ನೀಡಿದ್ದರು.

ಮನವಿ ಮಾಡಿದ ಮೂರೇ ದಿನಗಳಲ್ಲಿ ಕಲಾವಿದರ ಕೋರಿಕೆಯಂತೆ ಹಾರ್ಮೋನಿಯಂಯನ್ನು ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ವಿತರಣೆ ಮಾಡಿದರು. ಹಾರ್ಮೋನಿಯಂ ಪಡೆದ ಕಲಾವಿದ ಬೆಟ್ಟನಾಯಕ ಮೂರೇ ದಿನಗಳಲ್ಲಿ ತಮ್ಮ ಕೋರಿಕೆ ಪೂರೈಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಜಿಲ್ಲಾಧಿಕಾರಿಯವರಿಗೆ ಕೃತಜ್ಞತೆ ಸಲ್ಲಿಸಿದರು.

From Around the web