ಚಿರತೆ ಹಾವಳಿ ಮೂರು ಕರು ಬಲಿ..!

ದಾವಣಗೆರೆ: ಆನೆ ಹಾವಳಿಯಿಂದ ಕಂಗಾಲಾಗಿರುವ ಚನ್ನಗಿರಿ ತಾಲೂಕಿನ ಜನತೆ ಇದೀಗ. ಚಿರತೆ ಹಾವಳಿಯಿಂದಾಗಿ ಬೆಚ್ಚಿ ಬಿದ್ದಿದ್ದು, ಚಿರತೆ ಹಾವಳಿಯಿಂದ ಜನ, ಜಾನುವಾರುಗಳಿಗೆ ರಕ್ಷಣೆ ನೀಡುವಂತೆ ಅರಣ್ಯ ಇಲಾಖೆ ಮೊರೆ ಹೋಗಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬೆಟ್ಟ ಕಡೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿ ಕಾಣಿಸಿಕೊಂಡಿದೆ. ಮೂರು ಕರುಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿರುವ ಚಿರತೆಯ ಭಯಕ್ಕೆ ಗ್ರಾಮಸ್ಥರು ಹೊರಗೆ ಬರಲು, ಕೃಷಿ ಕೆಲಸಕ್ಕೆ ಹೋಗಲು, ಅರಣ್ಯದ ಕಡೆಗೆ ಹೆಜ್ಜೆ ಹಾಕಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಟ್ಟ ಕಡೂರು ಗ್ರಾಮದಲ್ಲಿ ಈಗಾಗಲೇ ಮೂರು ಕರುಗಳನ್ನು ಚಿರತೆ ಬಲಿಪಡೆದಿದ್ದು, ಮತ್ತಷ್ಟು ಪ್ರಾಣಿಗಳ ಜೀವಹಾನಿಯಾಗುವಮುನ್ನ, ಜನರ ಮೇಲೆ ಚಿರತೆ ದಾಳಿ ಮಾಡುವ ಮುನ್ನಅದನ್ನು ಸೆರೆ ಹಿಡಿಯಬೇಕು. ಕಳೆದ ಕೆಲವು ದಿನಗಳಿಂದಲೂ ಬೆಟ್ಟ ಕಡೂರು ಹಾಗೂ ಸುತ್ತಮುತ್ತಲಿನ ಅರಣ್ಯಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು, ಉಪಟಳ ನೀಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೂರು ಕರುಗಳ ಮೇಲೆ ಚಿರತೆ ದಾಳಿ ಮಾಡಿ, ಬಲಿ ಪಡೆದ ಹಿನ್ನೆಲೆಯಲ್ಲಿ ಬೋನ್ ಇಟ್ಟು, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಚನ್ನಗಿರಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದು, ಆದಷ್ಟು ಬೇಗನೆ ಚಿರತೆ ಹಾವಳಿಯಿಂದ ಗ್ರಾಮಸ್ಥರಿಗೆ, ಜಾನುವಾರುಗಳಿಗೆ ರಕ್ಷಣೆ ನೀಡಿ, ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.