ರಿಪೇರಿ ಮಾಡುವಾಗಲೇ ಲೈನ್‌ಮ್ಯಾನ್ ಸಾವು: ಕುಟುಂಬಸ್ಥರ ಆಕ್ರಂದನ

 
ರಿಪೇರಿ ಮಾಡುವಾಗಲೇ ಲೈನ್‌ಮ್ಯಾನ್ ಸಾವು: ಕುಟುಂಬಸ್ಥರ ಆಕ್ರಂದನ

ದಾವಣಗೆರೆ: ವಿದ್ಯುತ್ ಟ್ರಾನ್ಸ್ ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿದ ಪರಿಣಾಮ ಕೆಇಬಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ನಡೆದಿದೆ‌.

ಕೆಇಬಿ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರಬಗಟ್ಟೆ ಗ್ರಾಮದ ಚಿಕ್ಕಸ್ವಾಮಿ ಮೃತಪಟ್ಟ ದುರ್ದೈವಿ. ಅರಬಗಟ್ಟೆ ಗ್ರಾಮದ ಹನುಮಂತಪ್ಪ ಹಾಗು ಸರೋಜಮ್ಮ ದಂಪತಿ ಏಕೈಕ ಪುತ್ರ ಚಿಕ್ಕಸ್ವಾಮಿ, ಕಡು ಬಡತನದಲ್ಲಿ ಕೂಲಿ ಮಾಡಿ ಪುತ್ರನಿಗೆ ವಿದ್ಯಾಭ್ಯಾಸ ಮಾಡಿಸಿ ನೌಕರಿ ಕೊಡಿಸಿ ಪವಿತ್ರ ಎಂಬುವರ ಜೊತೆ ವಿವಾಹವನ್ನೂ ಮಾಡಲಾಗಿತ್ತು.

ಪಾವಗಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಸ್ವಾಮಿ ಅವರನ್ನು ಅವರ ಕುಟುಂಬದ ಅಪೇಕ್ಷೆಯ ಮೇರೆಗೆ ನಾಲ್ಕು ತಿಂಗಳ ಹಿಂದೆ ಹೊನ್ನಾಳಿಗೆ ವರ್ಗಾವಣೆ ಆಗಿತ್ತು. ಆದ್ರೆ, ವಿದ್ಯುತ್ ಅಪಘಾತದಲ್ಲಿ ದುರ್ಮರಣ ಹೊಂದಿದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ತಮ್ಮ ಜೀವವನ್ನೇ ಒತ್ತೆಹಿಟ್ಟು ಕಾರ್ಯ ನಿರ್ವಹಿಸುವ ಕೆಇಬಿ ನೌಕರರು ಆದಷ್ಟು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.

ಬೆಸ್ಕಾಂ ಎಂಡಿ ಜೊತೆ ಕರೆ ಮೂಲಕ ಮಾತನಾಡಿ ಸರ್ಕಾರದ ವತಿಯಿಂದ ಕುಟುಂಬ ಸದಸ್ಯರಿಗೆ ನೌಕರಿ ಸೇರಿದಂತೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರಲ್ಲದೇ, ಹೊನ್ನಾಳಿ ಕೆಇಬಿ ಇಲಾಖೆ ವತಿಯಿಂದ 5 ಲಕ್ಷ ರೂಪಾಯಿ ಕೊಡಿಸುವುದಾಗಿ ಭರವಸೆ ನೀಡಿದರು. ವೈಯಕ್ತಿಕವಾಗಿ 1 ಲಕ್ಷ ರೂ. ನೀಡಿ ಚಿಕ್ಕಸ್ವಾಮಿ ಅವರ ಕುಟುಂಬಕ್ಕೆ ಶಾಸಕ ಸಾಂತ್ವನ ಹೇಳಿದರು.

From Around the web