ಗಡಿಯಲ್ಲಿ ವಿಜೃಂಭಣೆಯಿಂದ ಜರುಗಿತು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ

 
ಗಡಿಯಲ್ಲಿ ವಿಜೃಂಭಣೆಯಿಂದ ಜರುಗಿತು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ

ಚಾಮರಾಜನಗರ: ಅಪ್ಪಟ ಕನ್ನಡಿಗರೇ ಇರುವ ಚಾಮರಾಜನಗರ - ತಮಿಳುನಾಡಿನ ಗಡಿಯಲ್ಲಿರುವ ತಾಳವಾಡಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ಮಸೀದಿ ಮುಂಭಾಗ ನಡೆಯಿತು.

ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಹೊಂದುಕೊಂಡು ತಮಿಳುನಾಡಿಗೆ ಸೇರಿದ ತಾಳವಾಡಿಯಲ್ಲಿ ಭಾಷಾತೀತ, ಧರ್ಮಾತೀತವಾದ ತಾಳವಾಡಿ ಮಾರಮ್ಮನ ಜಾತ್ರೆ ಪ್ರಯುಕ್ತ ಮಸೀದಿ ಮುಂಭಾಗದಲ್ಲೇ ಇಂದು ಕೊಂಡೋತ್ಸವ ನಡೆಯಿತು.

ಸುಮಾರು 150 ವರ್ಷಗಳಿಂದ ಈ ಕೊಂಡೋತ್ಸವ ನಡೆಯುತ್ತಾ ಬಂದಿದ್ದು   ತಾಳವಾಡಿ ಫಿರ್ಕಾದ 58 ಗ್ರಾಮಗಳು ಸೇರಿದಂತೆ ಚಾಮರಾಜನಗರ, ತಮಿಳುನಾಡಿನ ಈರೋಡ್ ಹಾಗೂ ಕೊಯಮತ್ತೂರಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಮುಖ್ಯಬೀದಿಯಲ್ಲಿರುವ ಮಾರಮ್ಮನ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲಸ್ವಾಮಿ ಗುಡಿ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ಈ ಜಾತ್ರೆಯ ವಿಶೇಷ.

ನಾಲ್ಕು ದಶಕದ ಹಿಂದೆ ಜಾತ್ರೆ ಸಂಬಂಧ ಘರ್ಷಣೆಯಾಗಿತ್ತು. ನಂತರ ಊರಿನ ಎಲ್ಲಾ ಕೋಮಿನ ಮುಖಂಡರು ಕುಳಿತು ಚರ್ಚಿಸಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದರೊಂದಿಗೆ ಜಾತ್ರಾ ಮಹೋತ್ಸವ ಆಚರಣೆಗೆ ಮುಂದಾಗಿ ಅಂದಿನಿಂದಲೂ ಸಾಮಾರಸ್ಯದಿಂದ ಮಸೀದಿ ಮುಂಭಾಗ ಕೊಂಡೋತ್ಸವ ನಡೆದುಕೊಂಡು ಬಂದಿದೆ.

ಚಂಡಿಮೇಳ, ಗೊರವರ ಕುಣಿತ, ವೀರಗಾಸೆ, ಬೀರೇದೇವರ ಕುಣಿತ ಇತ್ಯಾದಿ ಜಾನಪದ ಕಲಾ ತಂಡಗಳು ಮತ್ತು ಮಂಗಳವಾದ್ಯಗಳೊಂದಿಗೆ ಅದ್ದೂರಿಯಾಗಿ ಉತ್ಸವ ನಡೆದಿದೆ. ಜಾತ್ರೆ ವೇಳೆ ಯಾರ ಮನೆಯಲ್ಲಿಯೂ ಘಾಟು, ಒಗ್ಗರಣೆ, ಕರಿದ ತಿನಿಸು, ಮಾಂಸಾಹಾರ ಮಾಡುವುದಿಲ್ಲ. ಜತೆಗೆ, ಸತ್ತವರ ಶವವನ್ನು ಊರೊಳಗೆ ತರುವಂತಿಲ್ಲ. ಇದನ್ನು ಎಲ್ಲ ಕೋಮಿನವರು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.

ಜಾತ್ರೆ ಅಂಗವಾಗಿ ಗ್ರಾಮದ ಒಂದೊಂದು ಜನಾಂಗದವರಿಗೂ ನಿರ್ಧಿಷ್ಟ ಜವಾಬ್ದಾರಿ ವಹಿಸಿ ಅಚ್ಚುಕಟ್ಟಾಗಿ ಕೊಂಡೋತ್ಸವ ನಡೆದಿದ್ದು ಅರ್ಚಕ ಶಿವಣ್ಣ 60 ಅಡಿ ಉದ್ದದ 2 ಅಡಿ ಆಳದ ಕೊಂಡ ಹಾಯ್ದರು.

From Around the web