ಹಂಟಿಂಗ್ ವಿಡಿಯೋ ಹಾಕಿದವರ ಬೇಟೆಗೆ ಅರಣ್ಯ ಇಲಾಖೆಯಿಂದ ಹೊಸ ತಂತ್ರಾಂಶ..

 
ಹಂಟಿಂಗ್ ವಿಡಿಯೋ ಹಾಕಿದವರ ಬೇಟೆಗೆ ಅರಣ್ಯ ಇಲಾಖೆಯಿಂದ ಹೊಸ ತಂತ್ರಾಂಶ..

ಚಾಮರಾಜನಗರ: ಬೇಟೆಯಾಡುವುದು ಹೇಗೆ, ಕಾಡುಹಂದಿಯ ರುಚಿಕರ ಖಾದ್ಯ, ದಂತ, ವನ್ಯಜೀವಿ ಚರ್ಮಗಳ ವಸ್ತು ಮಾರಾಟಕ್ಕಿದೆ, ಬೇಟೆಯಾಡುವ ಬಗೆ ಹೀಗೆ ಯೂಟ್ಯೂಬ್ ಸೇರಿದಂತೆ ಹತ್ತಾರು ವೆಬ್ ಸೈಟ್ ಗಳಲ್ಲಿ ಕಾಣಸಿಗುವ ವಿಡಿಯೋಗಳನ್ನು ಹಾಕಿದವರನ್ನು ಬೇಟೆಯಾಡಲು ಅರಣ್ಯ ಇಲಾಖೆ ಕಾರ್ಯತಂತ್ರ ರೂಪಿಸಿದೆ.

ಚಾಮರಾಜನಗರ ವೃತ್ತದ ಸಿಸಿಎಫ್ ಮನೋಜ್ ಕುಮಾರ್ ಹೊಸದೊಂದು ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಜಿಲ್ಲಾ ಮಟ್ಟದಲ್ಲೇ ಮೊದಲು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿಲು ಮುಂದಾಗಿದ್ದಾರೆ.

ವನ್ಯಜೀವಿಗಳ ಬೇಟೆಗೆ ಪ್ರೇರೆಪಿಸುವುದು ಕೂಡ ಅರಣ್ಯ ಅಪರಾಧವಾಗಿದೆ. ಹೀಗಾಗಿ ಬೇಟೆಯಾಡುವ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು, ಬೇಟೆಯಾಡಿ ಅಡುಗೆ ಮಾಡುವ ವಿಡಿಯೋಗಳು, ವಿವಿಧ ವನ್ಯಜೀವಿ ಉತ್ಪನ್ನಗಳ ಬೆಲೆಗಳು ಮತ್ತು ಮಾರಾಟಕ್ಕೆ ಯತ್ನ, ಬೇಟೆಯ ವಿಧಾನಗಳು ಮುಂತಾದವುಗಳ ವಿಡಿಯೋ ಅಪ್ಲೋಡ್ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.

ಹೀಗಿದೆ ತಂತ್ರಾಂಶ : ಬೇಟೆಗೆ ಸಂಬಂಧಿಸಿದ ವಿಡಿಯೋಗಳು ಅಪ್ ಲೋಡ್ ಮಾಡಿದ ಕೂಡಲೇ ಅರಣ್ಯ ಇಲಾಖೆಯ ಕಂಟ್ರೋಲ್ ರೂಮಿಗೆ ಅಲರ್ಟ್ ಮೆಸೆಜ್ ಬರಲಿದೆ. ನೆಟ್ವರ್ಕ್ ಐಪಿ ಅಡ್ರೆಸ್,‌ ವಿಡಿಯೋದಲ್ಲಿರುವ ಅಪರಾಧ ಅಂಶಗಳ ವಿವರ ಕ್ಷಣಮಾತ್ರದಲ್ಲೇ ಅರಣ್ಯಾಧಿಕಾರಿಗಳ ಗಮನಕ್ಕೆ ಬರಲಿದೆ‌. ವೆಬ್ ಸೈಟ್ ಗಳು, ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟಕ್ಕೆ ಯತ್ನಿಸುವವರ ಕುರಿತು ಅರಣ್ಯ ಇಲಾಖೆಗೆ ಅಲರ್ಟ್ ಮೆಸೆಜ್ ಬರುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಕುರಿತು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆಯು ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ.‌ ಅವರಿಗೆ ಪ್ರತ್ಯೇಕ ವಾಹನ,ಕಾರ್ಯಾಚರಣೆಗೆ ಬಳಸುವ ಸಾಧನಗಳು ಕೂಡ ಶೀಘ್ರವೇ ವಿಲೇವಾರಿ ಆಗಲಿದೆ. ಅರಣ್ಯ ಅಪರಾಧ ತಡೆಯಲು ಹೊಸ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ. ಇದು ದೇಶದ ಮಟ್ಟದಲ್ಲೇ ನಡೆದರೆ ಎಲ್ಲಾ ರಾಜ್ಯಗಳಿಗೂ ಉಪಯೋಗವಾಗಲಿದ್ದು ಸಂಬಂಧ ಮೇಲಾಧಿಕಾರಿಗಳ ಗಮನ ಸೆಳೆದಿದ್ದೇನೆ ಎಂದರು‌.

From Around the web