ಪುರಸಭೆಯಲ್ಲಿ ಭ್ರಷ್ಟಾಚಾರ, ದುರಾಡಳಿತ ನಡೆಯುತ್ತಿದೆಂದು ಆರೋಪಿಸಿ ಪ್ರತಿಭಟನೆ

 
ಪುರಸಭೆಯಲ್ಲಿ ಭ್ರಷ್ಟಾಚಾರ, ದುರಾಡಳಿತ ನಡೆಯುತ್ತಿದೆಂದು ಆರೋಪಿಸಿ ಪ್ರತಿಭಟನೆ

ಆನೇಕಲ್: ಪುರಸಭೆಯಲ್ಲಿ ಭ್ರಷ್ಟಾಚಾರ ಹಾಗೂ ದುರಾಡಳಿತ ತಾಂಡವವಾಡುತ್ತಿದೆ ಎಂದು ಆರೋಪಿಸಿ ಇಂದು ಬೆಂಗಳೂರು ಹೊರವಲಯ ಆನೇಕಲ್ ಪುರಸಭೆ ಕಚೇರಿಯ ಮುಂಭಾಗ ಬಿಜೆಪಿ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆನೇಕಲ್ ಪಟ್ಟಣದ ದೇವರಕೊಂಡಪ್ಪ ವೃತ್ತದಿಂದ ಬಿಜೆಪಿ ಸದಸ್ಯರು ಹಾಗೂ ನೂರಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಪುರಸಭೆ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆಗೆ ಒಳಪಡುವ ಖಾಲಿ ನಿವೇಶನಗಳನ್ನು ಕೆಲವು ಬಲಾಢ್ಯರು ಕಬಳಿಕೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಇಲ್ಲಿನ ಆಡಳಿತ ಪಕ್ಷ ಹಾಗೂ ಅಧಿಕಾರಿ ವರ್ಗ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಆನೇಕಲ್ ಪಟ್ಟಣದ ಪುರಸಭೆಯ ನಿವೇಶನವನ್ನು ಮಾಜಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಎಂಬುವವರಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಇದಕ್ಕೆ ಪುರಸಭೆಯ ಆಡಳಿತ ಪಕ್ಷ ಹಾಗೂ ಅಧಿಕಾರಿಗಳು  ಆ ಜಾಗಕ್ಕೆ ಕಾಂಪೌಂಡ್ ಹಾಕಲು ಅನುಮತಿಯನ್ನು ನೀಡಿ ಜಾಗವನ್ನು ಕಬಳಿಸಲು ಮುಂದಾಗಿರುವ ವ್ಯಕ್ತಿಯ ಜೊತೆಗೆ ಶಾಮೀಲಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಅಕ್ರಮದ ಬಗ್ಗೆ ಧ್ವನಿ ಎತ್ತಿದ ಬಿಜೆಪಿಯ ಪುರಸಭಾ ಸದಸ್ಯರ ಮೇಲೆಯೇ ಧಮ್ಕಿ ಹಾಕಿ ಪ್ರಾಣ ಬೇದರಿಕೆಯಾಗುತ್ತಿದ್ದಾರೆಂದು ಆರೋಪಿಸಿದರು. ಜೊತೆಗೆ ಪುರಸಭೆಯಲ್ಲಿ ಭ್ರಷ್ಟಾಚಾರ ಹಾಗೂ ದುರಾಡಳಿತ ತಾಂಡವವಾಡುತ್ತಿದ್ದು, ಖಾತೆಗಳ ಬುಕ್ ನಲ್ಲಿ ತಿದ್ದಿ ನಕಲಿ ಖಾತೆಗಳನ್ನ ಮಾಡಿಕೊಡುತ್ತಿದ್ದಾರೆ, ಇದಕ್ಕೆ ಪುರಸಭೆಯ ಆಡಳಿತ ಪಕ್ಷ ಹಾಗೂ ಮುಖ್ಯಾಧಿಕಾರಿಗಳು ನೇರ ಶಾಮೀಲಾಗಿದ್ದಾರೆಂದು ಪುರಸಭಾ ಬಿಜೆಪಿ ಸದಸ್ಯ ಸುರೇಶ್ ಬಾಬು ಆರೋಪಿಸಿ ಕೂಡಲೇ ಈ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ದಿನೇಶ್ ರವರಿಗೆ ಮನವಿ ಪತ್ರ ನೀಡಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಪುರಸಭಾ ಅಧ್ಯಕ್ಷ ಪದ್ಮನಾಭ ಮಾತನಾಡಿ ಪುರಸಭೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ, ಈಗಿರುವ ಆಡಳಿತ ಪಕ್ಷ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ವಿರೋಧ ಪಕ್ಷವಾದ ಬಿಜೆಪಿಯವರು ಈ ರೀತಿಯಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆನೇಕಲ್ ಪುರಸಭೆಯಲ್ಲಿ ಈ ಹಿಂದೆ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದಂತಹ ಸಂಧರ್ಭದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಅದಕ್ಕೆ ಸಾಕ್ಷಿ ಎಂಬಂತೆ ಆನೇಕಲ್ ಪುರಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರ ಹೆಸರಿನಲ್ಲಿರುವ ಖಾಸಗಿ ಶಾಲೆಗಳು ಹಾಗೂ ಬಡಾವಣೆಗಳಿದ್ದು, ಸಾಕಷ್ಟು ಕಡೆ ರಸ್ತೆ ಹಾಗೂ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಈ ಅಕ್ರಮಗಳನ್ನು ಹೊರತರುವ ಪ್ರಯತ್ನ ಮಾಡಲು ದಾಖಲೆಗಳನ್ನು ಕಲೆ ಹಾಕುತ್ತಿರುವ ವಿಷಯವನ್ನು ತಿಳಿದು ಇದನ್ನು ದಾರಿ ತಪ್ಪಿಸಬೇಕೆನ್ನುವ ಉದ್ದೇಶದಿಂದ ಇಂದು ಬಿಜೆಪಿಯವರು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಯಾರು ಅಕ್ರಮ ಮಾಡಿದ್ದಾರೆಂದು ತನಿಖೆ ನಡೆಯಲಿ ನಾನು ಸಿದ್ದವಾಗಿದ್ದೇವೆಂದರು.

From Around the web