ಮಲೆ ಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ವಿರುದ್ಧ ಬೀದಿಬದಿ ವ್ಯಾಪಾರಿಗಳ ಆಕ್ರೋಶ...!

 
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ವಿರುದ್ಧ ಬೀದಿಬದಿ ವ್ಯಾಪಾರಿಗಳ ಆಕ್ರೋಶ...!

ಚಾಮರಾಜನಗರ: ಒಂದೆಡೆ ಮಾದಪ್ಪನಿಗೆ ವಿವಿಧ ಸೇವೆಗಳಿಂದ ದಿನವೊಂದಕ್ಕೆ ಲಕ್ಷ- ಲಕ್ಷ ಆದಾಯ ಬರುತ್ತಿದ್ದರೇ, ಮತ್ತೊಂದೆಡೆ ಪ್ರಾಧಿಕಾರದ ಅವೈಜ್ಞಾನಿಕ ನಿಯಮದ ವಿರುದ್ಧ ಬೀದಿಬದಿ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ‌.

ಸೋಮವಾರ ಒಂದೇ ದಿನದಲ್ಲಿ ಚಿನ್ನದ ರಥ ಸೇವೆಯಿಂದ ಬರೋಬ್ಬರಿ 11.61 ಲಕ್ಷ ರೂ. ಸಂಗ್ರಹವಾಗಿದ್ದು ಇನ್ನಿತರೆ ಸೇವೆಗಳಿಂದ 3 ಲಕ್ಷಕ್ಕೂ ಅಧಿಕ ಹಣ ಮಾದಪ್ಪನ ಸನ್ನಿಧಿಗೆ ಹರಿದು ಬಂದಿದೆ. ಎಲ್ಲಾ ಸೇರಿ ಇಂದು ಒಂದೇ ದಿನಕ್ಕೆ 15.43 ಲಕ್ಷ ಆದಾಯ ಬರೀ ಸೇವೆಗಳಿಂದಲೇ ಸಂದಾಯವಾಗಿದೆ.

ಹೀಗೆ  ಒಂದೆಡೆ ಮಾದಪ್ಪ ದಿನೇದಿನೆ ಶ್ರೀಮಂತನಾಗುತ್ತಿದ್ದರೇ ಮತ್ತೊಂದೆಡೆ ಬೀದಿಬದಿ ವ್ಯಾಪಾರಿಗಳು ಶ್ರೀ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ವಿರುದ್ಧ ಆಕ್ರೋಶದ ಮಳೆಯನ್ನೇ ಸುರಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬೀದಿಬದಿ ವ್ಯಾಪಾರಿಗಳ ತೆರವಿಗೆ ಮುಂದಾಗಿರುವ ಶ್ರೀ ಮಲೆಮಹದೇಶ್ವರ ಕ್ಷೇತ್ರ ಪ್ರಾಧಿಕಾರವು, ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಎಚ್ಚರಿಕೆ ನೀಡುತ್ತಿದೆ.

ದಿನ ನಿತ್ಯದ ನಮ್ಮ ಸಂಪಾದನೆ 300–500 ದಾಟುವುದಿಲ್ಲ.  ಹರಾಜಿನಲ್ಲಿ 50 ಸಾವಿರ ರೂ ಮೊತ್ತದ ಇಎಂಡಿ ಇಟ್ಟು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಮಳಿಗೆ ಪಡೆಯುವುದು ನಮ್ಮಿಂದ ಸಾಧ್ಯವೇ? ವಿದ್ಯಾವಂತರಾದ ನಾವೂ ಕೆಲಸ ಇಲ್ಲದೇ ಹುಟ್ಟಿದ ಊರಿನಲ್ಲಿ ಜೀವನ ಕಂಡುಕೊಳ್ಳಲು ಬೀದಿ ಬದಿ ವ್ಯಾಪಾರಕ್ಕೆ ಕುಳಿತರೆ ಪ್ರಾಧಿಕಾರದ ಅಧಿಕಾರಿಗಳು ನಮ್ಮನ್ನು ಬ್ರಿಟಿಷರಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ನಮ್ಮ ವ್ಯಾಪಾರ ವಸ್ತುಗಳನ್ನು ತುಂಬಿಕೊಂಡು ಹೋಗಿಬಿಡುತ್ತಾರೆ ಎಂದು ಶೀಲಾ, ಸೌಮ್ಯ, ಸುರೇಶ್‌ ಎಂಬ ವ್ಯಾಪಾರಿಗಳು ಅಳಲು ತೋಡಿಕೊಂಡರು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಳಿಗೆ ನಿರ್ಮಿಸಿಕೊಟ್ಟರೂ ಟೆಂಡರ್‌ ಪಡೆದು ಮಳಿಗೆಯಲ್ಲಿ ವ್ಯಾಪಾರ ಮಾಡದೇ ಬೀದಿಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ ಎಂಬುದು ಶ್ರೀಕ್ಷೇತ್ರ ಪ್ರಾಧಿಕಾರದ ವಾದವಾಗಿದೆ.

From Around the web