ನಾಪತ್ತೆಯಾಗಿದ್ದ ಉತ್ಸವ ಮೂರ್ತಿಯ ಕರಡಿಗೆ ಕಸದ ಜಾಗದಲ್ಲಿ ಪತ್ತೆ

 
ನಾಪತ್ತೆಯಾಗಿದ್ದ ಉತ್ಸವ ಮೂರ್ತಿಯ ಕರಡಿಗೆ ಕಸದ ಜಾಗದಲ್ಲಿ ಪತ್ತೆ

ಚಾಮರಾಜನಗರ: ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ದೇಗುಲದಲ್ಲಿ ನಾಪತ್ತೆಯಾಗಿದ್ದ ಉತ್ಸವ ಮೂರ್ತಿ ಶ್ರೀ ಪಾರ್ವತಿ ಅಮ್ಮನವರಿಗೆ ಧರಿಸಿದ್ದ ಸುಮಾರು 30 ಗ್ರಾಂ‌.ತೂಕದ ಚಿನ್ನದ ಕರಡಿಗೆ ಇಂದು ಮಧ್ಯಾಹ್ನ ದೇಗುಲದ ಎದುರು ಕಸ ಹಾಕುವ ಸ್ಥಳದಲ್ಲಿ ಪತ್ತೆಯಾಗಿದೆ.

ಉತ್ಸವ ಮೂರ್ತಿ ಶ್ರೀ ಪಾರ್ವತಮ್ಮನವರ ಚಿನ್ನದ ಕರಡಿಗೆ ನಾಲ್ಕೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಬಂದ ದೇವಾಲಯದ ಆಡಳಿತ ಮಂಡಳಿ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಆದರೆ ಇಂದು ಮಧ್ಯಾಹ್ನ‌ 3.45ರ‌ ವೇಳೆಯಲ್ಲಿ ದೇವಾಲಯದ ಹೊರಗುತ್ತಿಗೆ ನೌಕರ ಸುನಿಲ್ ಕುಮಾರ್ ಎಂಬುವರು ದೇವಾಲಯದ ರಾಜಗೋಪುರದ ಎದುರು ಕಸ ಹಾಕುವ ಜಾಗದಲ್ಲಿ ತೆರಳುತ್ತಿದ್ದ ವೇಳೆ ಕರಡಿಗೆ ಕಂಡಿದೆ. ಕರಡಿಗೆಯನ್ನು ಕಂಡ ಸುನಿಲ್ ಕುಮಾರ್ ಕೂಡಲೇ ಕಾರ್ಯದರ್ಶಿ ಜಯ ವಿಭವಸ್ವಾಮಿ ಅವರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಜಿ.ಎನ್ ಹಾಗೂ ಉಪಕಾರ್ಯದರ್ಶಿ ಬಸವರಾಜ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ತ್ಯಾಜ್ಯ ವಸ್ತು ಮಧ್ಯೆ‌ ಸಿಕ್ಕ ದೇವರಿಗೆ ಧರಿಸಿದ್ದ ಚಿನ್ನದ ಕರಡಿಗೆಯನ್ನು ವಶಕ್ಕೆ ಪಡೆದ ಪೊಲೀಸರು ಮಹಜರು ನಡೆಸುತ್ತಿದ್ದು, ಬಳಿಕ ಕರಡಿಗೆಯನ್ನು ಹಸ್ತಾಂತರಿಸಲಿದ್ದಾರೆ. 

ದೇವಾಲಯದ‌ ಹೊರಗುತ್ತಿಗೆ ಪೌರಕಾರ್ಮಿಕ ನೌಕರ ಸುನಿಲ್ ಕುಮಾರ್‌ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಚಿನ್ನದ ಕರಡಿಗೆ ಹುಡುಕಾಟದಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಜಯವಿಭವ ಸ್ವಾಮಿ ತಿಳಿಸಿದ್ದಾರೆ. ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ, ನಿರ್ಲಕ್ಷ್ಯತನ ಹಾಗೂ‌ ಬೇಜವಾಬ್ದಾರಿ ಬಗ್ಗೆ‌ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

From Around the web