ನಾಪತ್ತೆಯಾಯ್ತು ಪವಾಡ ಪುರುಷ ಮಾದಪ್ಪನ ಚಿನ್ನದ ಕರಡಿಗೆ !

 
ನಾಪತ್ತೆಯಾಯ್ತು ಪವಾಡ ಪುರುಷ ಮಾದಪ್ಪನ ಚಿನ್ನದ ಕರಡಿಗೆ !

ಚಾಮರಾಜನಗರ : ರಾಜ್ಯದ ಸುಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದ ಪವಾಡ ಪುರುಷ ಮಾದಪ್ಪನ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಲ ತಲಾಂತರದಿಂದಲ್ಲೂ ಮಾದಪ್ಪನ ಉತ್ಸವ‌ಮೂರ್ತಿಗೆ ಧರಿಸಿರುವ ಚಿನ್ನದ ಕರಡಿಗೆ ಇದಾಗಿದ್ದು ಕಳೆದ ನಾಲ್ಕೈದು ದಿನಗಳ ಹಿಂದೆ ನಾಪತ್ತೆಯಾಗಿದೆ

ಸರದಿ ಅರ್ಚಕರ ಸುಪರ್ದಿನಲ್ಲಿದ್ದ ಚಿನ್ನದ ಕರಡಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಒಡೆವೆಯಾಗಿದೆ. ನಾಪತ್ತೆ ಪ್ರಕರಣ ಬೆಳಕಿಗೆ ಬಂದರೂ ಸಹ ಮಲೆ ಮಹದೇಶ್ವರಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ.

ದೇವಾಲಯದ ಅರ್ಚಕರಲ್ಲೇ ಮೂರು ಗುಂಪುಗಳಿದ್ದು, ಗುಂಪುಗಳ ನಡುವೆ ಒಳಗೊಳಗೆ ವೈಮನಸ್ಯವಿದ್ದು, ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಕೃತ್ಯ ಎಸಗಿರುವ ಶಂಕೆ ಕಾಣುತ್ತಿದ್ದು, ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

ಇಂದು ನಡೆಯಲಿರುವ ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣ ಮುಚ್ಚಿಹಾಕುವ ಯತ್ನವೂ ನಡೆಯುವ ಸಾಧ್ಯತೆ ಇದೆ ಎನ್ನುವುದು ಒಂದಾದರೆ, ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಹದೇಶ್ವರಬೆಟ್ಟದ ಪೊಲೀಸ್ ಠಾಣೆಗೆ ದೇವಸ್ಥಾನದಲ್ಲಿ ಮಾದಪ್ಪನ‌ ಚಿನ್ನದ ಕರಡಿಗೆ ಕಾಣುತ್ತಿಲ್ಲವೆಂದು ಬುಧವಾರ ಸಂಜೆ ಅರ್ಜಿ ನೀಡಿದೆ.

From Around the web