ತಮಿಳುನಾಡಿನಲ್ಲಿ‌ ಮೂರು ಜನರನ್ನ ಬಲಿ ಪಡೆದಿದ್ದ ಕಾಡಾನೆಯ ಸೆರೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

 
ತಮಿಳುನಾಡಿನಲ್ಲಿ‌ ಮೂರು ಜನರನ್ನ ಬಲಿ ಪಡೆದಿದ್ದ ಕಾಡಾನೆಯ ಸೆರೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಆನೇಕಲ್: ಕಾಡಿನಿಂದ ಕಾಡಂಚಿನ ಗ್ರಾಮದ ಕಡೆಗೆ ಬಂದಿದ್ದ ಒಂಟಿ ಸಲಗ ಆನೆಯೊಂದು ಕಳೆದ ಕೆಲ ದಿನಗಳಿಂದ ದಾಂಧಲೆ ನಡೆಸಿ ಮೂರು ಮಂದಿಯನ್ನ ಬಲಿ ಪಡೆದಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಸುತ್ತಮುತ್ತಲಿನ ಗ್ರಾಮಗಳ ಕಡೆ ಒಂಟಿ ಸಲಗ ಆನೆಯೊಂದು ಬೀಡುಬಿಟ್ಟಿತ್ತು. ಈ ಸಂಧರ್ಭದಲ್ಲಿ ರೈತರು ಜಮೀನಿನ ಕಡೆ ಹಾಗೂ ಜಾನುವಾರುಗಳನ್ನು ಮೇಯಿಸಲು ಹೋದಂತಹ ಸಂಧರ್ಭದಲ್ಲಿ ದಾಳಿ ನಡೆಸಿ ಮೂರು ಮಂದಿಯನ್ನ ಬಲಿ ಪಡೆದಿತ್ತು.

ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರನ್ನು ನೀಡಿ ಆನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಕೀಯ ಸಿಬ್ಬಂದಿ ಕಾಡಂಚಿನ ಗ್ರಾಮಗಳ ಕಡೆ ಮೂರು ದಿನಗಳ ಕಾಲ ಕಾರ್ಯಚರಣೆ ನಡೆಸಿ ಆನೆಯು ಯಾವ ಭಾಗದಲ್ಲಿ ಹೆಚ್ಚು ಓಡಾಟ ನಡೆಸುತ್ತಿದೆ ಎನ್ನುವಂತಹ ಜಾಡು ಹಿಡಿದು ಮಾಹಿತಿಯನ್ನು ಸಂಗ್ರಹಿಸಿದ್ದರು.

ತಿರುಚಿಪಲ್ಲಿ ಅರಣ್ಯ ಪ್ರದೇಶದಲ್ಲಿ ಆನೆಯು ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಆನೆಗೆ ಅರವಳಿಕೆ ಚುಚ್ಚು ಮದ್ದನ್ನು ನೀಡಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದು, ಕಾಡಾನೆಯ ಸೆರೆಯಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

From Around the web