ಲಿಂಗಾಭಿಷೇಕಕ್ಕೆ 35 ಕಿಮೀ ಕಾಲ್ನಡಿಗೆಯಲ್ಲಿ ಗಂಗೆ ಹೊತ್ತು ತರ್ತಾರೆ ವಂಶಸ್ಥರು

 
ಲಿಂಗಾಭಿಷೇಕಕ್ಕೆ 35 ಕಿಮೀ ಕಾಲ್ನಡಿಗೆಯಲ್ಲಿ ಗಂಗೆ ಹೊತ್ತು ತರ್ತಾರೆ ಈ ವಂಶಸ್ಥರು

ಚಾಮರಾಜನಗರ: ಶಿವರಾತ್ರಿ ಎಂದರೆ ಜಾಗರಣೆ, ಬಿಲ್ವಾರ್ಚಣೆ, ಅಭಿಷೇಕ ಸಾಮಾನ್ಯ. ಆದರೆ, ಗಡಿಜಿಲ್ಲೆ ಚಾಮರಾಜನಗರದ ಗ್ರಾಮದ ಕಾಲುನಡಿಗೆ ಸಂಪ್ರದಾಯ ತುಸು ಕಷ್ಟವೇ ಆಗಿದೆ. ಆದರೆ ಭಕ್ತಿ ವಿಚಾರದಲ್ಲಿ ಎಷ್ಟೇ ಕಷ್ಟವೆನಿಸಿದರೂ ಜಿಲ್ಲೆಯ ಜನತೆ ಅದನ್ನು ಚಾಚು ತಪ್ಪದೇ ನಿರ್ವಹಿಸಿ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸುತ್ತಾರೆ.

ಹೌದು, ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಐದು ಕುಟುಬದ ಮಂದಿ ತಲ ತಲಾಂತರದಿಂದ ಪ್ರತಿವರ್ಷ ಶಿವರಾತ್ರಿ ದಿನದಂದು ಬರೋಬ್ಬರಿ 35 ಕಿಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆಯನ್ನು ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ‌.

ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದ ಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ 5 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ. ಗ್ರಾಮದ 5 ಕುಟುಂಬಗಳಿಂದ ನಾಗಣ್ಣ, ಶಾಂತಮಲ್ಲಪ್ಪ, ಶಿವಮಲ್ಲಪ್ಪ, ಕುಮಾರ್, ರಾಜು, ಮಾದಪ್ಪ ಎಂಬವರು ಸುಮಾರು 35 ಕಿ.ಮೀ.ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ, ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆ  ಮೂಲಕ ಗ್ರಾಮ ಸೇರುತ್ತಾರೆ.

4 ಬಿಂದಿಗೆಗಳ ನೀರು ಸಿದ್ಧರಾಮೇಶ್ವರನ ಅಭಿಷೇಕಕ್ಕೆ 1ಬಿಂದಿಗೆ ನೀರು ಇನ್ನಿತರದೇವರ ಅಭಿಷೇಕಕ್ಕೆ ಹಾಗೂ ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.

ಶತಮಾನಗಳಿಂದ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು ನಮ್ಮ ಕುಟುಂಬಗಳು ಇದನ್ನು ಪಾಲಿಸಿಕೊಂಡು ಬರುತ್ತಿವೆ. ರಾತ್ರಿ ಭಜನೆ,ವಿಶೇಷ ಪೂಜೆ, ಜಾಗರಣೆ ನಡೆಯಲಿದೆ ಎನ್ನುತ್ತಾರೆ ಕಾಲ್ನಡಿಗೆಯಲ್ಲಿ ಗಂಗೆ ತರಲು ತೆರಳಿದ್ದ ಶಿವಮಲ್ಲಪ್ಪ.

ಗಂಗೆಯನ್ನು ತುಂಬಿಕೊಂಡು ಕಾಲ್ನಡಿಗೆಯಲ್ಲಿ ಸಾಗುವ ಜನರು ದಾರಿ ಮಧ್ಯೆ ಸಿಗುವ ಕೆರೆಗಳಲ್ಲಿ ಮಾತ್ರ ಬಿಂದಿಗೆ ಇಟ್ಟು ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಬೆಳಗ್ಗೆ ಶುಚಿರ್ಭೂತರಾಗಿ ನದಿ ತಟಕ್ಕೆ ತೆರಳಿ ಮತ್ತೇ ಅಲ್ಲಿ ಹೊಸ ಬಟ್ಟೆ ತೊಟ್ಟುಕೊಂಡು ಗಂಗೆ ಹೊತ್ತು ತರುತ್ತಾರೆ.‌ ಗಮನಿಸಬೇಕಾದ ಅಂಶ ಎಂದರೆ ಡಾಂಬಾರು ರಸ್ತೆಯಲ್ಲಿ ಬರಿಗಾಲಲ್ಲಿ 35 ಕಿಮೀ ನಡೆದರೂ ಸುಸ್ತು, ಕಾಲು ನೋವಾಗಲಿ ಬಾಧಿಸುವುದಿಲ್ಲವಂತೆ. ಬಿಂದಿಗೆ ಹೊತ್ತವರ ಮುಖದಲ್ಲೂ ಸುಸ್ತಿನ ಛಾಯೆ ಸುಳಿಯದಿರುವುದು ನೋಡುವರಿಗೆ ಅಚ್ಚರಿ ಮೂಡಿಸುತ್ತದೆ

ಚಾಮರಾಜನಗರ ಜಿಲ್ಲೆಯೆಂದರೆ ಒಂದಲ್ಲ ಒಂದು ವಿಶೇಷ ಆಚರಣೆ ಇಂದಿಗೂ ನಡೆಯುತ್ತಲೇ  ಇರುವ ಮೂಲಕ ಸಂಪ್ರದಾಯ ಆಚರಣೆಯಲ್ಲಿದೆ. ಒಟ್ಟಿನಲ್ಲಿ ಇವರ ಭಕ್ತಿಗೆ, ಆಧುನಿಕ ಯುಗದಲ್ಲೂ ಪಾಲಿಸುತ್ತಿರುವ ಸಂಪ್ರದಾಯ ಪಾಲನೆಗೆ ಶಿವನೂ ಮೆಚ್ಚಬಹುದೇನೋ ಅನಿಸದಿರದು‌.

From Around the web