ಚಲಿಸುತ್ತಿದ್ದ ಕಾರಿನ ಮೇಲೆ ಮುಗುಚಿಬಿದ್ದ ಟಿಪ್ಪರ್ ಲಾರಿ:  ಇಬ್ಬರ ದಾರುಣ ಸಾವು

 
ಚಲಿಸುತ್ತಿದ್ದ ಕಾರಿನ ಮೇಲೆ ಮುಗುಚಿಬಿದ್ದ ಟಿಪ್ಪರ್ ಲಾರಿ: ಇಬ್ಬರ ದಾರುಣ ಸಾವು

ಆನೇಕಲ್: ಅವರು ಕೆಲಸದ ನಿಮಿತ್ತ ತಮಿಳುನಾಡಿಗೆ ಹೋಗಿ ಇಂದು ಮುಂಜಾನೆ ಬೆಂಗಳೂರಿನತ್ತ ಹಿಂತಿರುಗಿದ್ದರು. ಇನ್ನೇನು ಒಂದು‌ ತಾಸು ಕಳೆದಿದ್ರೆ ಮನೆ ಸೇರಿಕೊಳ್ಳುತ್ತಿದ್ರು. ಆದ್ರೆ ಮಾರ್ಗ ಮಧ್ಯೆ ಜವರಾಯನ ರೀತಿ‌ ಬಂದ ಓವರ್ ಲೋಡ್ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯ ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿಯು ಕಾರಿನ ಮೇಲೆ ಮುಗುಚಿ ಬಿದ್ದು ಕಾರಿನಲ್ಲಿದ್ದ ಇಬ್ಬರು ಅಮಾಯಕರ ಪ್ರಾಣ ಪಕ್ಷಿ ಹಾರಿಹೋಗಿದೆ.

ಹೌದು.. ಚೆನೈ ಹಾಗೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಸಮೀಪದ ಲಾ ಕ್ಲಾಸ್ಸಿಕ್ ಹೋಟೆಲ್ ಮುಂಭಾಗ ಈ ಅಪಘಾತ ನಡೆದಿದೆ. ಅತ್ತಿಬೆಲೆ ಕಡೆಯಿಂದ ಚಂದಾಪುರ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಪಕ್ಕದಲ್ಲಿಯೇ ಬರುತ್ತಿದ್ದ ಮಾರುತಿ ವ್ಯಾಗನರ್ ಕಾರಿನ ಮೇಲೆ ಜಲ್ಲಿ ತುಂಬಿದ್ದ ಲಾರಿಯು ಮುಗುಚಿ ಬಿದ್ದಿದೆ. ಕಾರಿನಲ್ಲಿದ್ದ ತಮಿಳುನಾಡಿನ ವೇಲೂರು ಜಿಲ್ಲೆ ರಾಣಿಪೇಟೆ ಮೂಲದ ಜಗದೀಶ್ ಹಾಗೂ ಆಂಧ್ರಪ್ರದೇಶದ ಆನಂತಪುರಂ ಮೂಲದ ಪವನ್ ಕುಮಾರ್ ಚೌದರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇವರು ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿ ಖಾಸಗಿ ಕಂಪನಿಯೊಂದರ ಉದ್ಯೋಗಿಗಳಾಗಿದ್ದರು. ಹೊಸದೊಂದು ಪ್ರೋಜೆಕ್ಟ್ ವಿಷಯವಾಗಿ ತಮಿಳುನಾಡಿನಲ್ಲಿರುವ ಮತ್ತೊಂದು ಕಂಪನಿಗೆ ಕೆಲಸದ ನಿಮಿತ್ತ ತೆರಳಿ ಇಂದು ಮುಂಜಾನೆ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವುಸಿದೆ.

ಇತ್ತೀಚೆಗೆ ತಮಿಳುನಾಡಿನಿಂದ ಟಿಪ್ಪರ್ ಲಾರಿಗಳು ಹೆಚ್ಚಾಗಿ ಅಕ್ರಮವಾಗಿ ಕರ್ನಾಟಕವನ್ನು ಪ್ರವೇಶ ಮಾಡುತ್ತಿದ್ದು ಚೆಕ್ಪೋಸ್ಟ್ ಹಾಗೂ ಪೊಲೀಸರು ತಡೆಯುತ್ತಾರೆ ಎನ್ನುವ ಕಾರಣಕ್ಕೆ ಅತಿವೇಗವಾಗಿ ಲಾರಿಗಳನ್ನು ಚಲಾಯಿಸಿಕೊಂಡು ಬರುತ್ತಾರೆ. ಇಂದು ಕೂಡ ಅದೇ ರೀತಿ ಓವರ್ ಲೋಡ್ ಜಲ್ಲಿ ತುಂಬಿದ್ದ ಲಾರಿಯ ಚಾಲಕನ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಸಂಪೂರ್ಣ ಕಾರು ನುಜ್ಜುಗುಜ್ಜಾಗಿದ್ದು ಸ್ಥಳದಲ್ಲಿ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಟ್ರಾಫಿಕ್ ತೆರವು ಮಾಡಿದರು. ಘಟನೆಯ ಮಾಹಿತಿಯನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಅಡಿಷನಲ್ ಎಸ್ಪಿ ಲಕ್ಷ್ಮಿ ಗಣೇಶ್ ಪರಿಶೀಲನೆ ನಡೆಸಿ ಅಪಘಾತ ನಡೆದಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಪಘಾತದ ಬಳಿಕ ಲಾರಿಯ ಚಾಲಕ ತಲೆಮರೆಸಿಕೊಂಡಿದ್ದು ಪ್ರಕರಣ ಸಂಬಂಧ ದೂರು ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಓವರ್ ಲೋಡ್ ಜಲ್ಲಿ,ಮರಳನ್ನು ತುಂಬಿಕೊಂಡು ಕಾನೂನು ಬಾಹಿರವಾಗಿ ಬರುತ್ತಿರುವ ಲಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ‌ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್‌ ತಿಳಿಸಿದರು.

ಒಟ್ಟಿನಲ್ಲಿ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಚಲಿಸುತ್ತಿದ್ದರು ಕೂಡ ಪಕ್ಕದಲ್ಲಿ ಬಂದ ಟಿಪ್ಪರ್ ಲಾರಿ ಚಾಲಕರ ನಿರ್ಲಕ್ಷಕ್ಕೆ ಅಮಾಯಕ ಜೀವಗಳೆರಡು ಬಲಿಯಾಗಿರುವುದು ಮಾತ್ರ ನೋವಿನ ಸಂಗತಿ. ಇನ್ನಾದರೂ ಸಂಬಂಧ ಪಟ್ಟ ಪೋಲಿಸರು ಹಾಗೂ ಆರ್ಟಿಓ ಅಧಿಕಾರಿಗಳು ಓವರ್ ಲೋಡ್ ಹಾಕಿಕೊಂಡು ಅತಿವೇಗವಾಗಿ ಬರುವ ಲಾರಿಗಳ ಅಕ್ರಮ ಆಟಕ್ಕೆ ಬ್ರೇಕ್ ಹಾಕುತ್ತಾರ ಕಾದು ನೋಡಬೇಕಿದೆ.

From Around the web