ವಿಮಾನದಲ್ಲಿ ಮಹಿಳೆಗೆ ಹೆರಿಗೆ ನೋವು: ಹೆಣ್ಣು ಮಗು ಜನನ

 
ವಿಮಾನದಲ್ಲಿ ಮಹಿಳೆಗೆ ಹೆರಿಗೆ ನೋವು: ಹೆಣ್ಣು ಮಗು ಜನನ

ಬೆಂಗಳೂರು: ಬೆಂಗಳೂರಿನಿಂದ ಜೈಪುರಕ್ಕೆ ಹೊರಟ ಇಂಡಿಗೋ ವಿಮಾನದಲ್ಲಿ ಹೆಣ್ಣು ಮಗುವಿನ ಜನನವಾಗಿದೆ. ಅವಧಿ ಪೂರ್ವವಾಗಿ ಮಗುವಿನ ಜನಿಸಿದೆ ಎಂದು ಹೇಳಲಾಗಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನಿಂದ 5.45ಕ್ಕೆ ಹೊರಟ ವಿಮಾನ(6E 469)ದಲ್ಲಿ ತುಂಬು ಗರ್ಭಿಣಿ ಇದ್ದರು. ಆದರೆ, ಮಾರ್ಗ ಮಧ್ಯದಲ್ಲಿ ಹೆರಿಗೆ ನೋವು ಕಾಣಿಸಿದೆ. ಈ ವೇಳೆ ವಿಮಾನದಲ್ಲಿನ ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ಸಹ ಪ್ರಯಾಣಿಕರು ಹಾಗೂ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ.ಸುಬಾಹನ ನಝೀರ್ ಸೇರಿ ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ವಿಮಾನ 8 ಗಂಟೆಗೆ ಜೈಪುರದಲ್ಲಿ ಲ್ಯಾಂಡಿಂಗ್‌ ಆಗಿದೆ.

ಮಹಿಳೆಗೆ ಹೆರಿಗೆ ನೋವು ಮತ್ತು ಹೆರಿಗೆಯಾಗಿರುವ ವಿಚಾರವನ್ನು ವಿಮಾನದ ಪೈಲಟ್‌, ಜೈಪುರದ ಎಟಿಸಿಗೆ ಮಾಹಿತಿ ನೀಡಿದ್ದರು. ಹೀಗಾಗಿ, ಇಂಡಿಗೊ ಏರ್ಲೈನ್ಸ್‌ ಮತ್ತು ಜೈಪುರದ ವೈದ್ಯಕೀಯ ತಂಡಗಳು ತಾಯಿ-ಮಗುವನ್ನು ಬರ ಮಾಡಿಕೊಳ್ಳಲು ಸಿದ್ಧವಾಗಿ ನಿಂತಿದ್ದವು.

ನಿಲುಗಡೆಯಾದ ವಿಮಾನದಿಂದ ತಾಯಿ-ಮಗುವನ್ನು ಸ್ಟ್ರೆಚರ್‌ನಲ್ಲಿ ಹೊರಗೆ ಕರೆ ತರುವ ವೇಳೆ ವಿಮಾನ ನಿಲ್ದಾಣ ಮತ್ತು ಏರ್‌ಲೈನ್ಸ್‌ ಸಿಬ್ಬಂದಿ ಧನ್ಯವಾದದ ಕಾರ್ಡ್ ತೋರಿಸಿ ಸ್ವಾಗತ ಕೋರಿದರು. ಮಗುವನ್ನು ಕೂಡಲೇ ನಿಲ್ದಾಣದ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

From Around the web