ಅಂತರರಾಜ್ಯ ಗಡಿ ಬಂದ್ ಮಾಡಲ್ಲ: ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ - ಚಾಮರಾಜನಗರ ಡಿಸಿ

ಚಾಮರಾಜನಗರ: ತಮಿಳುನಾಡು, ಕೇರಳ ಗಡಿಗಳನ್ನು ಬಂದ್ ಮಾಡುವ ಪ್ರಶ್ನೆಯೇ ಇಲ್ಲಾ ಎಂದು ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಹೇಳಿದರು.
ಕೇರಳ ಗಡಿ ಹಂಚಿಕೊಂಡಿರುವ ಮೂಲೆಹೊಳೆ ಚೆಕ್ ಪೋಸ್ಟಿಗೆ ಅವರು ಭೇಟಿಮಾಡಿ ವೈನಾಡಿನ ಡಿಸಿ ಅದಿಲಾ ಅಬ್ದುಲ್ಲಾ ಅವರೊಂದಿವೆ ಸಮಾಲೋಚಿಸಿದ ಬಳಿಕ ಮಾತನಾಡಿ, ಅಂತರರಾಜ್ಯ ಗಡಿ ಮೂಲಕ ನಿತ್ಯ ವ್ಯಾಪಾರ ವಹಿವಾಟಿಗೆ ಸಂಚಾರ ನಡೆಯುತ್ತಿದೆ. ನಮ್ಮಲ್ಲಿನ ರೈತರು ಬೆಳೆ ಮಾರಾಟಕ್ಕೆ ತೆರಳುವುದರಿಂದ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡಲ್ಲ. ಆದರೆ, ನಮ್ಮ ಜಿಲ್ಲೆಯೊಳಕ್ಕೆ ಬರುವವರು ಆರ್ ಟಿಪಿಸಿಆರ್ ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕೆಂದು ಹೇಳಿದರು.
ನೆಗೆಟಿವ್ ರಿಪೋರ್ಟ್ ತರುವ ಕುರಿತು ವ್ಯಾಪಕ ಪ್ರಚಾರ ಮತ್ತು ಅರಿವು ಮೂಡಿಸಬೇಕೆಂದು ವೈನಾಡಿನ ಡಿಸಿ ಅವರಿಗೆ ತಿಳಿಸಿದ್ದೇನೆ ಅದಕ್ಕೆ ಅವರು ಒಪ್ಪಿದ್ದಾರೆ. ಖಾಲಿ ಬರುವ ವಾಹನಗಳಿಗೆ ಸ್ಯಾನಿಟೈಸ್ ಮಾಡುವಂತೆ ಸೂಚಿಸಿದ್ದು ನಾಳೆಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಿದ್ದಾರೆ.ಸರಕು ಸಾಗಾಟಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಅವರು ಹೇಳಿದರು.