ಸಿಡಿ ಸಂತ್ರಸ್ತೆಗೆ ಸರ್ಕಾರದಿಂದ ಭದ್ರತೆ ಸಿಗದ ಕಾರಣ ವಿರೋಧ ಪಕ್ಷವನ್ನು ಸಂಪರ್ಕಿಸಿದ್ದಾರೆ: ರಾಮಲಿಂಗಾರೆಡ್ಡಿ

 
ಸಿಡಿ ಸಂತ್ರಸ್ತೆಗೆ ಸರ್ಕಾರದಿಂದ ಭದ್ರತೆ ಸಿಗದ ಕಾರಣ ವಿರೋಧ ಪಕ್ಷವನ್ನು ಸಂಪರ್ಕಿಸಿದ್ದಾರೆ: ರಾಮಲಿಂಗಾರೆಡ್ಡಿ

ಆನೇಕಲ್: ಎಸ್ಐಟಿ ಹಾಗೂ ಪೋಲಿಸರಿಂದ ಯಾವುದೇ ಸಹಕಾರ ಹಾಗೂ ಭದ್ರತೆ ಸಿಗದ ಹಿನ್ನೆಲೆ ಸಿಡಿ ಸಂತ್ರಸ್ತ ಮಹಿಳೆಯು ವಿರೋಧ ಪಕ್ಷದ ನಾಯಕರ ಬಳಿ ಭದ್ರತೆ ಕೊಡಿ ಎಂದು ಕೇಳಿ ಕೊಂಡಿರಬಹುದೆಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ತಳಿ ಮತ್ತು ಹೊಸೂರಿನಲ್ಲಿ ಪ್ರಚಾರ ನಡೆಸಲು ತೆರಳುವ ಮಾರ್ಗ‌ಮಧ್ಯೆ ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು. ಈ ವೇಳೆ, ಸಂತ್ರಸ್ತ ಯುವತಿಗೆ ಎಸ್ಐಟಿ ಹಾಗೂ ಪೋಲಿಸರಿಂದ ಯಾವುದೇ ಸಹಕಾರ ಹಾಗೂ ಭದ್ರತೆ ಸಿಗದೆ ಇರುವುದರಿಂದ ವಿರೋಧ ಪಕ್ಷದ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬಳಿ ಭದ್ರತೆ ಕೇಳಿದ್ದಾಳೆ ಎಂದರು.

ಬಳಿಕ ಮಾತನಾಡಿ, ಪ್ರಕರಣದಲ್ಲಿ ಈಗಾಗಲೇ ರಮೇಶ್ ಜಾರಕಿಹೋಳಿ ರಾಜೀನಾಮೆ ನೀಡಿದ್ದು, ಎಫ್ಐಆರ್ ಕೂಡ ಅವರ ಮೇಲೆ ದಾಖಲಾಗಿ ತನಿಖೆಯೂ ಕೂಡ ಪ್ರಗತಿಯಲ್ಲಿದೆ. ಆದ್ರೆ ರಮೇಶ್ ಜಾರಕಿಹೊಳಿ ನನ್ನದೇನು ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಬಳಿಕವಷ್ಟೇ ಅದು ಸಾಬೀತಾಗಬೇಕಿದೆ. ಸಿಡಿ ಬಿಡುಗಡೆ ಯಾಗುತ್ತಿದ್ದಂತೆ 6 ಜನ ಸಚಿವರುಗಳು ಕೂಡ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಯಾಕೆ ಏನು ಎಂಬುದು ಅವರಿಗೆ ತಿಳಿದಿರಬೇಕು. ಡಿಕೆ ಶಿವಕುಮಾರ್ ಬಳಿ ರಾಜೀನಾಮೆ ನೀಡಿ ಎಂದು ಬಿಜೆಪಿಯವರು ಕೇಳಲು ಅವರೇನು ಕೋರ್ಟಿಗೆ ಹೋಗಿ ಬಿಜೆಪಿ ಮಂತ್ರಿಗಳ ರೀತಿ ಸ್ಟೇ ತಂದಿದ್ದಾರ, ಟ್ವೀಟ್ ಮಾಡಿದ ತಕ್ಷಣ ರಾಜೀನಾಮೆ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಸರ್ಕಾರ ಸಂತ್ರಸ್ತೆ ಮಹಿಳೆ ವಿಚಾರದಲ್ಲಿ ಎಫ್ಐಆರ್ ದಾಖಲು ಮಾಡಲು ತನಿಖೆ ನಡೆಸಲು ವಿಳಂಬ ಮಾಡಿದೆ. ಪೊಲೀಸರು ಹಾಗೂ ಎಸ್ಐಟಿ ತಂಡ ಇನ್ನೂ ಕೂಡ ಮಹಿಳೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಕರಣ ಇನ್ನೂ ತನಿಖೆ ಹಾದಿಯಲ್ಲಿರುವುದರಿಂದ ಪೋಲಿಸರು ಮಹಿಳೆಯನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿ ಭದ್ರತೆ ನೀಡಬೇಕಿದೆ ಎಂದರು.

From Around the web